ಸಿದ್ದುಗೆ ಗದ್ದುಗೆ: ಕಾರ್ಯಕರ್ತರ ಸಂಭ್ರಮ
ಕ.ಪ್ರ.ವಾರ್ತೆ, ಕಡೂರು, ಮೇ 11
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲಿರುವ ಸುದ್ದಿ ಹಬ್ಬುತ್ತಿದ್ದಂತೆಯೇ ಕಡೂರು ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಂತಸ ಹಂಚಿಕೊಂಡು ಸಂಭ್ರಮಿಸಿದರು.
ಶಿವಮೊಗ್ಗ ಬೆಂಗಳೂರು ರಾ.ಹೆ. ಹಾದು ಹೋಗುವ ಕಡೂರು ಪಟ್ಟಣದ ಕೆ.ಎಲ್.ವಿ. ವೃತ್ತದಲ್ಲಿ ಕಡೂರು ಹಾಗೂ ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕಗಳಿಂದ ಹಮ್ಮಿಕೊಳ್ಳಲಾಗಿದ್ದ ಸಂಭ್ರಮದಲ್ಲಿ ಕಡೂರು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಎಸ್. ಆನಂದ್, ಬೀರೂರು ಬ್ಲಾಕ್ ಅಧ್ಯಕ್ಷ ಕೆ.ಎಂ. ವಿನಾಯಕ್ ನೇತೃತ್ವದಲ್ಲಿ ಆಚರಿಸಿದ ಸಂಭ್ರಮದಲ್ಲಿ ಪಾಲ್ಗೊಂಡ ಮುಖಂಡರು ಸಂತಸ ಹಂಚಿಕೊಂಡರು.
ಕಾಂಗ್ರೆಸ್ ಪರ ಅಲೆ: ಇದೇ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿಯಾಗುವರೆಂಬ ಹಿನ್ನೆಲೆಯಲ್ಲಿ ಈ ಹಿಂದೆಯೇ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಹೊಮ್ಮಿತು ಎಂದರು.
ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಹವಾ ಸೃಷ್ಟಿಯಾಗಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಜ್ಯದ ಹಿಂದುಳಿದ ವರ್ಗಗಳು ಹಾಗೂ ಎಲ್ಲಾ ವರ್ಗಗಳೂ ಸೇರಿದಂತೆ ಲಕ್ಷಾಂತರ ಮತದಾರರು ಸಿದ್ದರಾಮಯ್ಯನವರತ್ತ ಒಲವು ತೋರಿಸಿ ಕಾಂಗ್ರೆಸ್ ಬೆಂಬಲಿಸಿ ಗೆಲ್ಲಿಸಿ ಉತ್ತಮ ತೀರ್ಪು ನೀಡಿದ್ದಾರೆ ಎಂದವರು ಹೇಳಿದರು.
ಈ ಹಿನ್ನೆಲೆಯಲ್ಲಿ ರಾಜ್ಯದ ಜನರು ಯಾವುದೇ ಹಣ ಆಮಿಷಕ್ಕೆ ಬಲಿಯಾಗದೆ ತಮ್ಮ ತೀರ್ಪನ್ನು ಕಾಂಗ್ರೆಸ್ ಪರವಾಗಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ ನ್ಯಾಯ ನೀಡುವ ನಿಟ್ಟಿನಲ್ಲಿ ಪಕ್ಷದ ಹೈ ಮಾಂಡ್ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಎಂದು ಘೋಷಿಸಿರುವುದರಿಂದ ರಾಜ್ಯದ ಎಲ್ಲ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ತೋಟದ ಮನೆ ಮೋಹನ್, ರವಿಕುಮಾರ್,ಶ್ರೀನಿವಾಸಮೂರ್ತಿ, ಬಶೀರ್ ಸಾಬ್, ಹರೀಶ್, ಲೋಕೇಶ್, ಲಕ್ಷ್ಮಣ್, ಜನರಲ್ ತಿಮ್ಮಯ್ಯ, ಮಂಜುನಾಥ್ ಇದ್ದರು.