ಅರ್ಜಿ ಆಹ್ವಾನ
ಚಿಕ್ಕಮಗಳೂರು: ತೋಟಗಾರಿಕೆ ಇಲಾಖೆ ವತಿಯಿಂದ ಮೂಡಿಗೆರೆಯ ಬೀಜುವಳ್ಳಿ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ ಉಚಿತವಾಗಿ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ ಆಯೋಜಿಸಿದೆ. ತರಬೇತಿ ಜೂನ್ 1 ರಿಂದ 2014ರ ಮಾರ್ಚ್ 31ರವರೆಗೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಮೇ 14 ಕೊನೆಯದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕಾ ಕಚೇರಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.
ದೇವಸ್ಥಾನದಲ್ಲಿ ಕಳವು
ಕೊಪ್ಪ: ಇಲ್ಲಿನ ಮೇಲಿನ ಪೇಟೆ ಸಮೀಪದ ಮಹಸತಿಯಮ್ಮ ದೇವಸ್ಥಾನದಲ್ಲಿ ರು. 24,000 ಮತ್ತು ಚಿನ್ನಾಭರಣ ಕಳ್ಳತನವಾದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಮೇ 10ರಂದು ಪೂಜೆ ಮುಗಿಸಿ ದೇವಸ್ಥಾನ ಬಾಗಿಲು ಹಾಕಿದ್ದು, ಭಾನುವಾರ ಪೂಜೆಗೆಂದು ಬಾಗಿಲು ತೆಗೆದಾಗ ದೇವಸ್ಥಾನದಲ್ಲಿ ಕಳ್ಳತನವಾಗಿರುವುದು ಬೆಳಗಿಗೆ ಬಂದಿದೆ. ದೇವಸ್ಥಾನದಲ್ಲಿದ್ದಾಗ ದೇವರ ಚಿನ್ನದ ತಾಳಿ, ಸರ, ಬೆಳ್ಳಿ ಸರ ಮತ್ತು 3 ಕಾಣಿಕೆ ಹುಂಡಿಯನ್ನು ಕಳ್ಳತನವಾಗಿದೆ ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಪ್ರಕಾಶ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸ್ ಶ್ವಾನದಳದೊಂದಿಗೆ ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಎ.ಪಿ.ಎಸ್.ಐ ರಮೇಶ್ ತಿಳಿಸಿದ್ದಾರೆ.
ಅಪರಿಚಿತ ಶವ ಪತ್ತೆ
ಮೂಡಿಗೆರೆ: ತಾಲೂಕಿನ ಕಳಸ ಸಮೀಪದ ಹೆಬ್ಬಾಳೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹವೊಂದು ಪತ್ತೆಯಾಗಿದೆ. ಸುಮಾರು 40 ವರ್ಷದ ಗಂಡಸಿನ ಶವ ಹೆಬ್ಬಾಳೆಯ ಭದ್ರಾ ನದಿಯ ಬದಿಯಲ್ಲಿ ಮಲಗಿರುವ ಸ್ಥಿತಿಯಲ್ಲಿದ್ದುದನ್ನು ಸ್ಥಳಿಯರು ಗಮನಿಸಿ ನೋಡಿದಾಗ ಸತ್ತು ಹೋಗಿರುವುದು ಕಂಡು ಬಂದಿದೆ. ನಂತರ ಕಳಸ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಕಳೆದ ಎರಡು ದಿನಗಳ ಹಿಂದೆಯೇ ಈ ವ್ಯಕ್ತಿ ವಿಷ ಸೇವಿಸಿ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆಯಾದರೂ, ಮರಣೋತ್ತರ ಪರಿಕ್ಷೆಯಿಂದ ನಿಖರವಾಗಿ ತಿಳಿಯಬೇಕಾಗಿದೆ. ಮೃತದೇಹವನ್ನು ಕಳಸ ಸಮುದಾಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ. ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂದು ಮಾಂಸ ಮಾರಾಟ ನಿಷೇಧ
ಚಿಕ್ಕಮಗಳೂರು: ಬಸವ ಜಯಂತಿ ಹಿನ್ನೆಲೆಯಲ್ಲಿ ಸೋಮವಾರ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಅಂದು ನಗರಸಭಾ ವ್ಯಾಪ್ತಿಯಲ್ಲಿನ ಎಲ್ಲಾ ಕಸಾಯಿಖಾನೆಗಳನ್ನು ಮುಚ್ಚುವಂತೆ ಹಾಗೂ ಮಾಂಸ ಮಾರಾಟ ಮಾಡದಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ನಗರಸಭಾ ಕಾಯಿದೆಯನ್ವಯ ದಂಡ ವಿಧಿಸಿ ಪರವಾನಗಿ ರದ್ದುಪಡಿಸುವುದಲ್ಲದೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.
ಸಿದ್ದರಾಮಯ್ಯ ಆಯ್ಕೆಗೆ ಸಂತಸ
ಮೂಡಿಗೆರೆ: ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯರನ್ನು ಆಯ್ಕೆಗೊಳಿಸಿರುವ ಕಾಂಗ್ರೆಸ್ ವರಿಷ್ಠರ ನಿರ್ಧಾರ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ರಾಜ್ಯ ಯುವ ಜಾಗೃತಿ ಮತದಾರರ ವೇದಿಕೆ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ್ ಫಲ್ಗುಣಿ ಹೇಳಿದರು. ಈ ಬಗ್ಗೆ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ದಕ್ಷ ಮತ್ತು ಪ್ರಾಮಾಣಿಕ ಮುಖ್ಯಮಂತ್ರಿಯ ಅಗತ್ಯವನ್ನು ಸಿದ್ದರಾಮಯ್ಯ ನೀಗಿಸುವ ವಿಶ್ವಾಸವಿದೆ. ಮೂಲ ಸಮಸ್ಯೆಗಳನ್ನು ಬಲ್ಲವರಾಗಿದ್ದು, ಉತ್ತಮ ಆಡಳಿತ ನೀಡುವ ಮೂಲಕ ನಿರೀಕ್ಷೆ ಹುಸಿಯಾಗಿಸಲಾರರು ಎಂದಿದ್ದಾರೆ.
ಪ್ರತಿಷ್ಠಾ ವರ್ಧಂತಿ ಮಹೋತ್ಸವ
ಕೊಪ್ಪ: ಇಲ್ಲಿನ ಅರಳಿಕಟ್ಟೆ ಶಕ್ತಿಗಣಪತಿ ದೇವಸ್ಥಾನ ಸೇವಾ ಟ್ರಸ್ಟ್‌ನಿಂದ ಶ್ರೀಗಣಪತಿ ದೇವರ 16 ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವನ್ನು ಮೇ 14ರಂದು ಹಮ್ಮಿಕೊಳ್ಳಲಾಗಿದೆ.ಪ್ರತಿಷ್ಠಾ ವರ್ಧಂತಿ ಮಹೋತ್ಸವನ್ನು ಅಂಗವಾಗಿ ಮೇ 14 ರ ಬೆಳಗ್ಗೆ ನವಗ್ರಹ ಪುರಸ್ಸರ ಗಣಪತಿ ಹೋಮ, ಸಾಮೂಹಿಕ ಸತ್ಯನಾರಾಯಣ ವ್ರತ, 1008 ಕಾಯಿಯ ಸಾಮೂಹಿಕ ಮೂಡು ಗಣಪತಿ ಸೇವೆ, ಮಧ್ಯಾಹ್ನ 12-30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ನಂತರ ಸಾರ್ವಜನಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಪಡಿತರ ಬಿಡುಗಡೆ
ಚಿಕ್ಕಮಗಳೂರು: ಮೇ ಮಾಹೆಗೆ ಜಿಲ್ಲೆಯ ಎ.ಎ.ವೈ ಪಡಿತರ ಚೀಟಿದಾರರಿಗೆ 29 ಕೆ.ಜಿ. ಅಕ್ಕಿ, 6 ಕೆ.ಜಿ. ಗೋಧಿ, 1 ಕೆ.ಜಿ. ಸಕ್ಕರೆ, ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ 4 ರಿಂದ 15 ಕೆ.ಜಿ. ಅಕ್ಕಿ, 1 ರಿಂದ 3 ಕೆ.ಜಿ. ಗೋಧಿ, 1 ಕೆ.ಜಿ. ಸಕ್ಕರೆ, ಹಾಗೂ ಕರ್ನಾಟಕ ಅಗ್ನಿ ಶಾಮಕ ತುರ್ತು ಸೇವೆಗಳ ಇಲಾಖೆ ಹಾಗೂ ಗೃಹ ರಕ್ಷಕ ಸಿಬ್ಬಂದಿಗಳಿಗೆ 15 ಕೆ.ಜಿ ಅಕ್ಕಿ ಹಾಗೂ 3 ಕೆ.ಜಿ. ಗೋಧಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಗ್ಯಾಸ್ ರಹಿತ ಪಡಿತರ ಚೀಟಿ ಹೊಂದಿದ ಪಟ್ಟಣ ಪ್ರದೇಶದವರಿಗೆ 5 ಲೀಟರ್ ಮತ್ತು ಅನೌಪಚಾರಿಕ ಪಡಿತರ ಪ್ರದೇಶದವರಿಗೆ 6 ಲೀ. ಹಾಗೂ ಗ್ರಾಮಾಂತರ ಪ್ರದೇಶದವರಿಗೆ 3 ಲೀಟರ್‌ನಂತೆ ಸೀಮೆ ಎಣ್ಣೆ ಬಿಡುಗಡೆ ಮಾಡಲಾಗಿದೆ. ಸಂಬಂಧಪಟ್ಟ ನ್ಯಾಯ ಬೆಲೆ ಅಂಗಡಿಯಿಂದ ತಿಂಗಳ ಒಳಗೆ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಗಿರಿಜನ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳು ಹಾಗೂ ಗಿರಿಜನ ಆಶ್ರಮ ಶಾಲೆ ಪ್ರವೇಶಕ್ಕೆ 5 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಚಿಕ್ಕಮಗಳೂರಿನ ಬ್ಯಾಲೈನ್ ರಸ್ತೆಯ ಪ್ರಿ-ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿನಿಲಯ, ಕೊಲ್ಲಾಪುರದಮ್ಮ ದೇವಸ್ಥಾನದ ರಸ್ತೆಯ ಪ್ರಿ-ಮೆಟ್ರಿಕ್ ಬಾಲಕರ ವಿದ್ಯಾರ್ಥಿನಿಲಯ, ಕೆ.ಬಿ. ಹಾಳ್, ಆಣೂರು, ಲಕ್ಯಾ ಹಾಗೂ ಸಂಗಮೇಶ್ವರಪೇಟೆಯ ಪ್ರಿ-ಮೆಟ್ರಿಕ್ ಬಾಲಕರ ವಿದ್ಯಾರ್ಥಿನಿಲಯ, ಕೆಳಗೂರಿನ ಪ್ರಿ-ಮೆಟ್ರಿಕ್ ಬಾಲಕಿಯರ ವಿದ್ಯಾರ್ಥಿನಿಲಯ, ತುಡುಕೂರು (ಆಲ್ದೂರು) ಗಿರಿಜನ ಆಶ್ರಮ ಶಾಲೆ (1 ರಿಂದ 5ನೇ ತರಗತಿಯವರೆಗೆ) ವಿದ್ಯಾರ್ಥಿನಿಲಯಗಳಲ್ಲಿ ಸೇರ್ಪಡೆಗೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಜೂ. 7 ಕೊನೆಯದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿನಿಲಯ ಅಥವಾ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಚಿಕ್ಕಮಗಳೂರು ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಎನ್‌ಐಎಸ್ ತರಬೇತಿಗೆ ಗೋಪಿ, ಅಂಕುಶ್
ದಾವಣಗೆರೆ, ಭಾರತ ಕ್ರೀಡಾ ಪ್ರಾಧಿಕಾರದಿಂದ ಕೊಲ್ಕತ್ತಾದಲ್ಲಿ ಮೇ 17ರಿಂದ ಜೂ 26ರವರೆಗೆ ನಡೆಯುವ ಉನ್ನತ ಮಟ್ಟದ ಕ್ರೀಡಾ ತರಬೇತುದಾರರ ಕೋರ್ಸ್ (ಎನ್‌ಐಎಸ್)ಗೆ ದಾವಣಗೆರೆ ಜಿಲ್ಲೆಯ ಹಿರಿಯ ಕ್ರಿಕೆಟ್ ಪಟು ಕೆ.ಎನ್. ಗೋಪಾಲಕೃಷ್ಣ ಹಾಗೂ ಅಂಕುಶ ಉಪಾಧ್ಯಾಯ ಆಯ್ಕೆಯಾಗಿದ್ದಾರೆ.
ಬ್ಲಾಕ್ ಬೆಲ್ಟ್ ಪದವಿ
ಮೂಡಿಗೆರೆ: ಇತ್ತೀಚೆಗೆ ಮೂಡಿಗೆರೆಯಲ್ಲಿ ಇಂಟರ್ ನ್ಯಾಷನಲ್ ಅಕಾಡೆಮಿ ಆಫ್ ಟ್ರೆಡೀಷನಲ್ ಮಾರ್ಷಲ್ ಕರಾಟೆ ಸಂಸ್ಥೆಯಿಂದ ಒಂದು ವಾರಗಳ ಕಾಲ ಬ್ಲಾಕ್ ಬೆಲ್ಟ್ ಪದವಿ ಪರೀಕ್ಷೆಯಲ್ಲಿ ಬ್ಲಾಕ್ ಬೆಲ್ಟ್ ಪದವಿ ಎಂ.ಸಿ. ಧನುಷ್, ಮೂಡಿಗೆರೆ ಚಂದ್ರಶೇಖರ್ ಮತ್ತು ಪ್ರೇಮಾ ದಂಪತಿಯ ಪುತ್ರರಾಗಿದ್ದಾರೆ.