ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀತಿಸಂಹಿತೆಯಿಂದ ಧಾರ್ಮಿಕ ಕಾರ್ಯಗಳಿಗೆ ತೊಂದರೆ

Lingaraj Badiger
Updated On : 13 May 2013, 2:57 am

ಕ.ಪ್ರ.ವಾರ್ತೆ ಚಿಕ್ಕಮಗಳೂರು  ಮೇ 12
ಚುನಾವಣಾ ನೀತಿ ಸಂಹಿತೆಯನ್ನು ರಾಜಕಾರಣಿಗಳಿಗೆ ಮಾತ್ರ ಅನ್ವಯಿಸಬೇಕು, ಧಾರ್ಮಿಕ ಕಾರ್ಯ ಮಾಡುತ್ತಿರುವ ಮಠಗಳಿಗೆ ಸಡಿಲಗೊಳಿಸಬೇಕು ಎಂದು ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಹೇಳಿದ್ದಾರೆ.
ಚಿಕ್ಕಮಗಳೂರಿನ ಬೀಕನಹಳ್ಳಿ ರಸ್ತೆಯ ವಿದ್ಯಾಭವನದಲ್ಲಿ ಕೂಡಲಸಂಗಮ ಬಸವ ಧರ್ಮ ಪೀಠ, ವಿಶ್ವಧರ್ಮ ಪ್ರವಚನ ಸಮಿತಿ, ರಾಷ್ಟ್ರೀಯ ಬಸವ ದಳದ ಸಹಯೋಗದಲ್ಲಿ ಶನಿವಾರ ರಾತ್ರಿ ನಡೆದ ಗುರುವಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ  ಮಾತನಾಡಿದ ಅವರು, ರಾಜಕಾರಣಿಗೆ, ಮಠಾಧೀಶರಿಗೆ ಒಂದೇ ರೀತಿಯಾದ ಚುಣಾವಣೆ ನೀತಿಸಂಹಿತೆ ಮಾಡಿದರೆ ಧಾರ್ಮಿಕ ಕಾರ್ಯಗಳಿಗೆ ತೊಂದರೆ ಉಂಟಾಗಲಿದೆ ಎಂದರು.
ಅಜ್ಞಾನ ಹೋಗಿ ಜ್ಞಾನ ಬರಲಿ: ಇಂದಿನ ಯುವಜನಾಂಗದಲ್ಲಿ ಜ್ಞಾನದ ಕೊರತೆ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿದೆ, ಇದರಿಂದ ಯುವ ಜನಾಂಗದಲ್ಲಿ ಸಂಸ್ಕೃತಿಯ ಪತನವು ಉಂಟಾಗುವುದು. ಆದರಿಂದ ಪಾಲಕರು, ಮಠಾಧೀಶರು ಪ್ರಾರ್ಥನೆ, ಪ್ರವಚನದ ಮೂಲಕ ಯುವ ಜನಾಂಗದಲ್ಲಿರುವ ಅಜ್ಞಾನವನ್ನು ದೂರ ಮಾಡಿ ಜ್ಞಾನವನ್ನು ತುಂಬುವುದರ ಮೂಲಕ ಸಂಸ್ಕೃತಿ ನಿರ್ಮಾಣ ಮಾಡುವಂತಹ ಕಾರ್ಯ ಮಾಡಬೇಕು ಎಂದು ಅವರು ಹೇಳಿದರು.
ಇಂದಿನ ಆಧುನಿಕ ಟಿ.ವಿ. ಮಾಧ್ಯಮದಿಂದ ಮಕ್ಕಳಲ್ಲಿ ಓದುವ ಕೌಶಲ್ಯ ಕಡಿಮೆಯಾಗುತ್ತಿದೆ. ಇಂತಹ ಮಕ್ಕಳಲ್ಲಿ ಓದುವ ಕೌಶಲ್ಯವನ್ನು ಮೂಡಿಸಲು ಪ್ರವಚನ, ಯೋಗ, ಜ್ಞಾನದಂತಹ ಕಾರ್ಯಗಳನ್ನು ಪಾಲಕರು ಹಮ್ಮಿಕೊಳ್ಳುವುದರ ಮೂಲಕ ಜ್ಞಾನವನ್ನು ವೃದ್ಧಿಸಬೇಕು ಎಂದು ತಿಳಿಸಿದರು.
 ಕೂಡಲಸಂಗಮ ಬಸವ ಧರ್ಮಪೀಠ ಬಸವ ತತ್ವವನ್ನು ಜಗತ್ತಿನಾದ್ಯಂತ ಬಿತ್ತರಿಸುವಂತಹ ಕಾರ್ಯವನ್ನು ಕಳೆದ 30 ವರ್ಷಗಳಿಂದ ನಿರಂತವಾಗಿ ಮಾಡುತ್ತಿದೆ. ಬಸವತತ್ವ ಪ್ರಚಾರ, ಯುವಕರಲ್ಲಿ ಸಂಸ್ಕೃತಿಯ ಅರಿವನ್ನು ಮೂಡಿಸುವ ಸಲುವಾಗಿ ವಿಶ್ವಧರ್ಮ ಪ್ರವಚನ ನಿರಂತರವಾಗಿ ಮಾಡುತ್ತಿದೆ, ಜೋತೆಗೆ ಕೂಡಲಸಂಗಮದಲ್ಲಿ ಶರಣ ಮೇಳ, ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ, ಧಾರವಾಡದಲ್ಲಿ ಶರಣೋತ್ಸವ, ಮಹಾರಾಷ್ಟ್ರದ ಅಲ್ಲಮ ಗಿರಿಯಲ್ಲಿ ಲಿಂಗಾಯತ ಗಣಮೇಳ ಮುಂತಾದ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಬಸವತತ್ವ ಪ್ರಸಾರ ಕಾರ್ಯವನ್ನು ಮಾಡುತ್ತಿದೆ ಎಂದರು.
ಉತ್ತಮ ಜೀವನ: ಸಮಾರಂಭ ಉದ್ಘಾಟಿಸಿ ಮಾತನಾಡಿದ ಗೌರಮ್ಮ ಬಸವೇಗೌಡ, ಬಸವಣ್ಣನವರು ಯಾವುದೇ ಜಾತಿ, ವರ್ಗ, ಪಂಗಡಕ್ಕೆ ಸಿಮೀತನಾದವರಲ್ಲ, ಇಡೀ ಸಮಾಜಕ್ಕೆ ಸೇರಿದವರು. 12ನೇ ಶತಮಾನದಲ್ಲಿ ಶರಣರು ಹೇಳಿದ ವಿಚಾರಗಳನ್ನು ಇಂದಿನ ಯುವ ಜನಾಂಗ ಅಧ್ಯಯನ ಮಾಡಿ ಶರಣ ವಿಚಾರದಲ್ಲಿ ಬದುಕಿನಲ್ಲಿ ರೂಢಿಸಿಕೊಂಡರೇ ಉತ್ತಮ ಜೀವನ ನಿರ್ಮಾಣವಾಗುವುದು ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಧರ್ಮ ಜೀವನದ ಮಾರ್ಗ. ಇಂದಿನ ಯುವಜನಾಂಗ ಧರ್ಮದ ಕಡೆ ಅಧಿಕ ಮಹತ್ವ ಕೊಡುವುದರ ಮೂಲಕ ಸಂಸ್ಕೃತಿ, ಸಂಸ್ಕಾರ ಪಡೆಯಬೇಕು, ಇಂದಿನ ಜನ ಬಸವತತ್ವ ಹೇಳುತ್ತಾರೆ ಆದರೆ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳದೇ ಇರುವುದು ದುರಂತ ಎಂದರು.
ಸಮಾರಂಭದಲ್ಲಿ ಕೂಡಲಸಂಗಮ ಬಸವ ಧರ್ಮ ಪೀಠದ ಬಸವರತ್ನಾ ಮಾತಾಜಿ, ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಗಂಗಾದೇವಿ, ವಿದ್ಯಾಭವನದ ಕಾರ್ಯದರ್ಶಿ ಉಮಾಮಹೇಶ, ಚಿಕ್ಕಮಗಳೂರು ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಬಾಸೂರು ಚನ್ನಪ್ಪ ಉಪಸ್ಥಿತರಿದ್ದರು. ಸಮಾರಂಭದ ಧ್ವಜಾರೋಹಣವನ್ನು ಉಮಾಮಹೇಶ ನೆರವೇರಿಸಿದರು. ಬಾಸೂರು ಚನ್ನಪ್ಪ ಸ್ವಾಗತಿಸಿದರು, ಚಂದ್ರಮ್ಮ ಸದಾನಂದಸ್ವಾಮಿ ಕಾರ್ಯಕ್ರಮ ನಿರೂಪಿಸಿದರು, ಕುಮಾರಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement