ಅಭಿವೃದ್ಧಿಗೆ ಗಮನ ಹರಿಸಿ
ಮೂಡಿಗೆರೆ ಮೇ 14: ಅಭಿವೃದ್ಧಿ ಕಾಮಗಾರಿ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಈ ವಿಷಯದಲ್ಲಿ ಕಳಪೆ ಕಾಮಗಾರಿ ನಡೆದರೆ ಸೂಕ್ತ ಕ್ರಮ ಜರುಗಿಗಿವುದಾಗಿ ಶಾಸಕ ಬಿ.ಬಿ.ನಿಂಗಯ್ಯ ಅಧಿಕಾರಿಗಳನ್ನು ಎಚ್ಚರಿಸಿದರು.
ತಹಸೀಲ್ದಾರ್ ರುದ್ರಪ್ಪಾಜಿರಾವ್ ಅವರೊಂದಿಗೆ ಮೂಡಿಗೆರೆ ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿದ ಅವರು, ಅಧಿಕಾರಿಗಳಿಗೆ ಆಮೆ ನಡಿಗೆಯಲ್ಲಿ ನಡೆಯುತ್ತಿರುವ ಕಾಮಗಾರಿ ಸೂಕ್ತ ಮಾಹಿತಿ ಒದಗಿಸುವಂತೆ ತಿಳಿಸಿದರು.
ನಂತರ ಸಂಬಂಧ ಪಟ್ಟ ಅಧಿಕಾರಿಗಳನ್ನು ಕರೆದು ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಪರ ಕೆಲಸ ಮಾಡುವ ಮೂಲಕ ಪಕ್ಷಕ್ಕೆ ಮತ್ತು ಕ್ಷೇತ್ರದ ಮತದಾರರಿಗೆ ಗೌರವ ತರುವ ನಿಟ್ಟಿನಲ್ಲಿ ನಡೆದುಕೊಳ್ಳುವುದಾಗಿ ತಿಳಿಸಿದರು.
ರಸ್ತೆ ಕಾಮಗಾರಿ ಮಾಹಿತಿ: ಪಟ್ಟಣದ ಗಂಗನಮಕ್ಕಿಯಲ್ಲಿ ನಡೆಯುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಯನ್ನೂ ಪಡೆದರು. ಇನ್ನೆರಡು ದಿನಗಳಲ್ಲಿ ತುರ್ತು ಸಭೆ ಕರೆದು ವಾಹನ ಓಡಾಟಕ್ಕೆ ಬದಲಿ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿ ವಿವಿಧ ಪಕ್ಷಗಳ ಮುಖಂಡರು, ಸಂಘಸಂಸ್ಥೆಗಳು, ವಾಹನ ಚಾಲಕರು ಮತ್ತು ಮಾಲೀಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಮೂಡಿಗೆರೆ ಕ್ಷೇತ್ರದ ಎಲ್ಲಾ ಸಮಸ್ಯೆ ಬಗ್ಗೆ ಮಾಹಿತಿ ಇದೆ. ಅವುಗಳಲ್ಲಿ ಬಹು ಮುಖ್ಯವಾಗಿದ್ದು ಕಳಸ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಮಾರ್ಪಡಿಸಲು ಹೋರಾಟ ರೂಪಿಸುವುದಾಗಿ ತಿಳಿಸಿದರು.
ಗಿರಿಜನ ವಿವಿಧೋದ್ದೇಶ ಸಂಘದ ವತಿಯಿಂದ ನೂತನ ಶಾಸಕ ಬಿ.ಬಿ.ನಿಂಗಯ್ಯ ಅವರನ್ನು ಅಭಿನಂದಿಸಲಾಯಿತು. ಗಿರಿಜನ ವಿವಿಧ್ದೋದ್ದೇಶ ಸಂಘದ ಅಧ್ಯಕ್ಷ ಮುತ್ತಪ್ಪ, ಗುತ್ತಿಗೆದಾರ ಹಮ್ಮಬ್ಬ. ವ್ಯವಸ್ಥಾಪಕ ಧನುಕರ ರೈ, ಜೆಡಿಎಸ್ ಮುಖಂಡ ರಂಜನ್ ಅಜಿತ್ ಕುಮಾರ್, ಎ.ಜೆ. ಸುಬ್ರಾಯ, ಸಿ.ಎಂ. ಗೋಪಾಲಗೌಡ ಸೇರಿದಂತೆಗಣ್ಯರು ಉಪಸ್ಥಿತರಿದ್ದರು.