ಬೆಂಕಿ ಅಕಸ್ಮಿಕ: 4 ಜಾನುವಾರು ಸಜೀವ ದಹನ
ತರೀಕೆರೆ: ಸಮೀಪದ ಬೇಲೇನಹಳ್ಳಿ ತಾಂಡ್ಯದಲ್ಲಿ ಬೆಂಕಿ ಅನಾಹುತ ನೆಡೆದು 4 ಜಾನುವಾರು, ಅಪಾರ ಪ್ರಮಾಣದಲ್ಲಿ ಬತ್ತ, ರಾಗಿ, ಜೋಳದ ಹುಲ್ಲು ಸಂಪೂರ್ಣ ನಾಶವಾಗಿದೆ.ಬೇಲೇನಹಳ್ಳಿ ತಾಂಡ್ಯದ ಕೃಷ್ಣಾನಾಯಕ್ ಅವರ ಮನೆಯ ಹಿಂಭಾಗದಲ್ಲಿದ್ದ ದನದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕ್ಷಣಾರ್ಧದಲ್ಲಿ ಹೊಗೆ ಮತ್ತು ಬೆಂಕಿ ಆವರಿಸಿ ಹುಲ್ಲು ಮೇಯುತ್ತಿದ್ದ ಎರಡು ಹಸು ಮತ್ತು ಎರಡು ಕರುಗಳೂ ಜೀವಂತವಾಗಿ ಬೆಂಕಿಗೆ ಆಹುತಿಯಾಗಿವೆ. ಉಳಿದ ನಾಲ್ಕು ಜಾನುವಾರುಗಳಿಗೂ ಬೆಂಕಿ ತಗುಲಿ ಗಾಯಗಳಾಗಿದೆ. ಮೇವು ನಾಶ: ಕೊಟ್ಟಿಗೆಯ ಪಕ್ಕದಲ್ಲೇ ಶೇಖರಿಸಿಟ್ಟಿದ್ದ 10 ಲೋಡ್ ರಾಗಿ, ಬತ್ತ, ಜೋಳದ ಹುಲ್ಲು ಬೆಂಕಿಯಲ್ಲಿ ಭಸ್ಮವಾಗಿದೆ. ತರೀಕೆರೆಯಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿತು.