ಇಂದು ಶಂಕರ ಮಹಾ ರಥೋತ್ಸವ
ಶೃಂಗೇರಿ: ಪಟ್ಟಣದ ಶಾರದಾ ಪೀಠದ ಸಂಸ್ಥಾಪಕ ಜಗದ್ಗುರು ಶಂಕರಾಚಾರ್ಯರ ಮಹಾರಥೋತ್ಸವ ಗುರುವಾರ ವೈಭವಯುತವಾಗಿ ಜರುಗಲಿದೆ. ಶಂಕರ ಜಯಂತಿ ಅಂಗವಾಗಿ ಮಠದ ಆವರಣದಲ್ಲಿರುವ ಶಂಕರಾಚಾರ್ಯ ದೇವಾಲಯದಲ್ಲಿ ಮೇ 10ರಿಂದ ಪ್ರತಿದಿನ ವಿಶೇಷ ಪೂಜೆ, ಹೋಮ ಹವನ, ಉಪನ್ಯಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಗಳು ನಡೆಯಿತು. ಗುರುವಾರ ಬೆಳಗ್ಗೆ 10 ಗಂಟೆಗೆ ಮಹಾರಥೋತ್ಸವ ನಡೆಯಲಿದೆ. ಸಂಜೆ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ಸಭೆ, ಅತಿಥಿಗಳ ಉಪನ್ಯಾಸ, ಶ್ರೀಗಳಿಂದ ಅನುಗ್ರಹ ಭಾಷಣ, ವೇದಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ, ವಿದ್ವತ್ಸಮ್ಮಾನ ನಡೆಯಲಿದೆ.
ಬಸ್- ಕಾರು ಡಿಕ್ಕಿ
ಶೃಂಗೇರಿ: ಇಲ್ಲಿನ ಬಿಲಗೆದ್ದೆ ಎಂಬಲ್ಲಿ ಖಾಸಗಿ ಬಸ್ ಹಾಗೂ ಕಾರ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಘಟನೆ ಮಂಗಳವಾರ ನಡೆದಿದೆ. ತೀರ್ಥಹಳ್ಳಿಯತ್ತ ಸಾಗುತ್ತಿದ ಬಸ್, ಶೃಂಗೇರಿಯತ್ತ ಬರುತ್ತಿದ್ದ ಕಾರ್‌ಗೆ ಅಪ್ಪಳಿಸಿದಾಗ ಈ ಘಟನೆ ಸಂಭವಿಸಿದೆ. ಕಾರ್‌ನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.