ಕಾಂಗ್ರೆಸ್ನಿಂದ ವಿಜಯ್ ಅಮಾನತು
ಚಿಕ್ಕಮಗಳೂರು: ಪಕ್ಷದ ಶಿಸ್ತು ಮತ್ತು ನಿಯಮವನ್ನು ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ ಕಾಫಿ ಮಂಡಳಿಯ ಮಾಜಿ ಸದಸ್ಯ ಡಿ.ಎಂ. ವಿಜಯ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಮಹಮದ್ ಆದೇಶ ಹೊರಡಿಸಿದ್ದಾರೆ.
ಪಕ್ಷದ ವರಿಷ್ಠರ ಬಗ್ಗೆ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿರುವುದರಿಂದ ಅದನ್ನು ಪಕ್ಷ ವಿರೋಧಿ ಚಟುವಟಿಕೆ ಎಂಬುದಾಗಿ ಪರಿಗಣಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆದೇಶದ ಮೇರೆಗೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಿಜಯ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಮಹಮದ್ ತಿಳಿಸಿದ್ದಾರೆ.
ನೂತನ ಶಾಸಕರಿಗೆ
ಅಭಿನಂದನೆ
ತರೀಕೆರೆ: ತರೀಕೆರೆ ಮೇ 15ರಂದು ಕ್ಷೇತ್ರದ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಸಹಕರಿಸಿದ ಕ್ಷೇತ್ರದ ಮತದಾರರಿಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಂ. ನರೇಂದ್ರ ಅವರು ಕೃತಜ್ಞತೆ ಅರ್ಪಿಸಿದ್ದಾರೆ ಮತ್ತು ಕ್ಷೇತ್ರದ ನೂತನ ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಪೂರ್ಣ ಸಹಕಾರ: ತಾಲೂಕಿನಲ್ಲಿ ಕೈಗೊಳ್ಳುವ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಪಕ್ಷ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುವ ಅವರು, ಭ್ರಷ್ಟಾಚಾರವನ್ನು ಪಕ್ಷ ವಿರೋಧಿಸುತ್ತದೆ ಮತ್ತು ಅದರ ವಿರುದ್ಧ ಪಕ್ಷ ಹೋರಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಶಿವಮೊಗ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಭದ್ರಾವತಿ ತಾಲೂಕಿನಲ್ಲಿ ಬಿಸಿಎಂ ಇಲಾಖೆಯಿಂದ ನಡೆಸುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಖಾಸಗಿ ಅನುದಾನಿತ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ 2012-13ನೇ ಸಾಲಿಗೆ ಖಾಲಿ ಇರುವ ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭದ್ರಾವತಿ ಟೌನ್ ದೂಣಭಘಟ್ಟ ರಸ್ತೆಯಲ್ಲಿರುವ ಬಾಲಕಿಯರ ವಿದ್ಯಾರ್ಥಿ ನಿಲಯ, ಸೀತಾರಾಂಪುರ, ಕಲ್ಲಿಹಾಳ್ ಹಾಗೂ ಹುಣಸೇಕಟ್ಟೆಗಳಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯ, ಹೊಳೆಹೊನ್ನೂರನಲ್ಲಿರುವ ಕನಕದಾಸ ಖಾಸಗಿ ಅನುದಾನಿತ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು 5 ರಿಂದ 10ನೇ ತರಗತಿಯವರೆಗೆ ಮಾತ್ರ ವ್ಯಾಸಂಗ ಮಾಡುವವರಾಗಿರಬೇಕು.ಪ್ರವೇಶ ಬಯಸುವ ವಿದ್ಯಾರ್ಥಿಗಳು ಭದ್ರಾವತಿಯ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಥವಾ ಆಯಾ ನಿಲಯದ ಮೇಲ್ವಿಚಾರಕರಿಂದ ಅಧಿಕೃತ ಅರ್ಜಿ ನಮೂನೆಯನ್ನು ಪಡೆದು ದಿನಾಂಕ ಜೂ.10ರೊಳಗೆ ಸಲ್ಲಿಸಲು ಕೋರಿದೆ.