ಶ್ರೀ ಚಾಮುಂಡೇಶ್ವರಿ 118ನೇ ಜಾತ್ರಾ ಮಹೋತ್ಸವ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 15
ಶ್ರೀ ಚಾಮುಂಡೇಶ್ವರಿ ಅಮ್ಮನವರ 118ನೇ ಜಾತ್ರಾ ಮಹೋತ್ಸವ ನಗರದಲ್ಲಿ 3 ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.
ಶಂಕರಪುರದ ಚಾಮುಂಡೇಶ್ವರಿ ದೇವಾಲಯದಲ್ಲಿ ನಿತ್ಯ ವಿಶೇಷ ಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ದೇವರಿಗೆ ವಿವಿಧ ರೀತಿಯ ಅಲಂಕಾರಗಳನ್ನು ಮಾಡಲಾಗಿತ್ತು. ದೇವಸ್ಥಾನದ ಬೀದಿಯಲ್ಲಿ ಹಸಿರು ತೋರಣಗಳಿಂದ ಸಿಂಗರಿಸಿ, ವಿದ್ಯುತ್ ದೀಪಾಲಂಕಾರಗಳನ್ನು ಮಾಡಿ ನಿತ್ಯ ಬಣ್ಣ ಬಣ್ಣದ ರಂಗವಲ್ಲಿಯನ್ನು ಬಿಡಿಸಲಾಗುತ್ತಿತ್ತು. ಮಹಿಳೆಯರು ಗಂಗೆ ಪೂಜೆ ನೆರವೇರಿಸಿ ಊರಿನಲ್ಲಿ ಮಳೆ, ಬೆಳೆಗೆ ಪ್ರಾರ್ಥಿಸಿದರು.
ಪ್ರತಿ ವರ್ಷದಂತೆ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಚಾಮುಂಡೇಶ್ವರಿ ದೇವಿಯನ್ನು ದೀಪಾಲಂಕೃತ ವಾಹನದಲ್ಲಿ ಕುಳ್ಳಿರಿಸಿ ಡೊಳ್ಳು ಕುಣಿತ, ತಮಟೆ ವಾದ್ಯ, ಬೊಂಬೆ ಮೇಳ, ಕೀಲು ಕುದುರೆ, ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಅಲ್ಲಲ್ಲಿ ಪಟಾಕಿ ಸಿಡಿಸಿದ ಭಕ್ತರು ಅದ್ದೂರಿಯಾಗಿ ಮೆರವಣಿಗೆ ನಡೆಸಿದರು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಪೌರಾಯುಕ್ತ ಎಚ್.ಜಿ. ಪ್ರಭಾಕರ್, ನಾಡಿನಲ್ಲಿ ಉತ್ತಮ ಮಳೆ, ಬೆಳೆ ಬಂದು ಜನ ಸುಖ, ಶಾಂತಿ ಬಯಸುವ ಸಲುವಾಗಿ ಹಿರೀಯರು ಇಂತಹ ಜಾತ್ರೆ ಮತ್ತು ಸಿಡಿ ಮಹೋತ್ಸವಗಳನ್ನು ಆಚರಿಸುತ್ತಾ ಬಂದಿದ್ದಾರೆ. ದಿನನಿತ್ಯ ಊರಿನ ಸ್ವಚ್ಛತೆಯಲ್ಲಿ ತೊಡಗಿ ಜನರ ಹಿತ ಬಯಸುವ ಕಾರ್ಮಿಕರಿಗೆ ಈ ಜಾತ್ರೆ ಹಬ್ಬವಾಗಿ ಪರಿಣಮಿಸಿದೆ. ಇಂತಹ ಮಹೋತ್ಸವದ ಮೂಲಕ ಶಾಂತಿ, ಸಂಯಮ, ಸಹೋದರತ್ವತೆ ಬೆಳೆಸಿಕೊಂಡು ಹೋಗುವಂತೆ ತಿಳಿಸಿದರು.
ಬುಧವಾರ ಶಂಕರಪುರದ ದೇವಸ್ಥಾನದ ಮುಂಭಾಗ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರಸಭೆ ಸದಸ್ಯ ನರಸಿಂಹ ಮಾತನಾಡಿ, ಸ್ಥಳೀಯವಾಗಿ ಸುತ್ತಮುತ್ತ ಭಕ್ತಾಧಿಗಳು ಶ್ರದ್ದಾಭಕ್ತಿಯಿಂದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ನೂರಾರು ಜನರಿಗೆ ಅನ್ನದಾನ ಮಾಡುವ ಮೂಲಕ ಜಾತ್ರೆಗೆ ಅರ್ಥ ತುಂಬಿದ್ದಾರೆಂದರು.
ಮುಖಂಡರಾದ ಪಿ. ಗುರುಮೂರ್ತಿ, ಬಿ. ಅಣ್ಣಯ್ಯ, ಗೋಪಿ, ನಟರಾಜ್, ರಾಜು, ನರಸಿಂಹ, ಗುರುಮೂರ್ತಿ, ಎನ್. ಅಣ್ಣಯ್ಯ, ಆಧೀಶ್, ಸುನಿಲ್, ರಂಗಪ್ಪ ಹಾಜರಿದ್ದರು.