ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಕ್ಸಲರು ಮುಖ್ಯವಾಹಿನಿಗೆ ಬರಲಿ: ಐಜಿಪಿ

Mainashree
Updated On : 17 May 2013, 11:03 am

ಕಪ್ರ ವಾರ್ತೆ, ಶೃಂಗೇರಿ, ಮೇ 16
ನಕ್ಸಲರು ನಮ್ಮ ರಾಷ್ಟ್ರದ ವಿರುದ್ಧವೇ ಅಂತರ್ ಯುದ್ಧ ನಡೆಸುತ್ತಿದ್ದಾರೆ. ಇವರು ನಡೆಸುತ್ತಿರುವ ಕೃತ್ಯ ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಕೃತ್ಯಗಳಾಗಿವೆ. ನಕ್ಸಲರಲ್ಲಿ ಹೆಚ್ಚಿನವರು ವಿದ್ಯಾವಂತರಾಗಿದ್ದು, ಇಂತಹ ವಿದ್ವಾಂಸಕ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹಿಂಸಾ ಮಾರ್ಗ ತೊರೆದು ಸಮಾಜದ ಮುಖ್ಯವಾಹಿನಿಗೆ ಬರಲಿ ಎಂದು ಐಜಿಪಿ ಭಾಸ್ಕರ್‌ರಾವ್ ಸಲಹೆ ನೀಡಿದರು.
 ಗುರುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಮಾವೋವಾದಿಗಳು ಚೀನಾ ಮೊದಲಾದ ರಾಷ್ಟ್ರಗಳನ್ನು ನೆಲೆ ಕಂಡುಕೊಂಡಿದ್ದು, ಅಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದ್ದರು. ಆದರೆ ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ಹಿಂಸಾ ಮಾರ್ಗದಿಂದ ಏನನ್ನು ಸಾಧಿಸಲಾಗುವುದಿಲ್ಲ. ಕರ್ನಾಟಕದಲ್ಲಿ ನಕ್ಸಲ್ ಪಿಡುಗು ತೊಲಗಿಸುವುದು ನಮ್ಮ ಉದ್ದೇಶವಾಗಿದೆ. ದುರ್ಗಮ,ದಟ್ಟಾರಣ್ಯಗಳಲ್ಲಿ ನಮ್ಮ ಪಡೆ ಹಗಲು ರಾತ್ರಿ ಕಾರ್ಯಾಚರಣೆ ನಡೆಸುತ್ತಿದೆ ಎಂದರು.
ಶರಣಾಗಲಿ: ನಕ್ಸಲ್ ಶರಣಾಗತಿ ಪ್ಯಾಕೇಜ್, ನಕ್ಸಲ್ ಪ್ಯಾಕೇಜ್ ಈಗಾಗಲೇ ನೀಡಲಾಗುತ್ತಿದೆ. ಸರ್ಕಾರದ ನೀತಿಗಳು ಬದಲಾಗಿದೆ. ಇಲ್ಲಿ ನಿರ್ಗತಿಕರು ಯಾರು ಇಲ್ಲ. ಇಲ್ಲಿನ ಜನರು ಶಾಂತಿ ಪ್ರಿಯರು. ಇಲ್ಲಿನ ಜನರಿಗೆ ಯಾವುದೇ ಸಿದ್ಧಾಂತ ಅಗತ್ಯವಿಲ್ಲ. ಅದನ್ನು ಬೆಂಬಲಿಸುವುದೂ ಇಲ್ಲ. ನಕ್ಸಲರು ಪೊಲೀಸರ ಭಯವಿದ್ದರೆ ಜಿಲ್ಲಾಧಿಕಾರಿಗಳ, ಜಿಲ್ಲಾ ನ್ಯಾಯಾಧೀಶರ ಅಥವಾ ಪತ್ರಕರ್ತರ ಸಮ್ಮುಖದಲ್ಲಿ ಶರಣಾಗತರಾಗಲಿ ಎಂದು ಹೇಳಿದರು.
ಕಾರ್ಯಾಚರಣೆ ಚುರುಕು: ಬುಧವಾರ ಕೆರೆಕಟ್ಟೆ ಗ್ರಾಮದ ಹೆಗ್ಗಾನೆ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ನಮ್ಮ ಪಡೆಯ ಸಿಬ್ಬಂದಿಯೊಬ್ಬ ಗಾಯಗೊಂಡಿದ್ದರೂ ಕಾರ್ಯಾಚರಣೆ ತೀವ್ರಗೊಳಿಸಿದ್ದೇವೆ. ಮಂಡಗಾರು ಲತಾ ನಾಯಕತ್ವದ 13 ಜನರ ತಂಡ ಕಳೆದೆರೆಡು ದಿನಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದ ಬಗ್ಗೆ ಮಾಹಿತಿಯಿತ್ತು. ನಾವು ಕಾರ್ಯಚರಣೆಯನ್ನು ಚುರುಕುಗೊಳಿಸಿದ್ದೆವು ಎಂದರು.
ಬುಧವಾರ ನಕ್ಸಲರು ಗುಂಡು ಹಾರಿಸಿದಾಗ ಪ್ರತಿಯಾಗಿ ನಾವು ಗುಂಡು ಹಾರಿಸಿದೆವು. 40 ಮೀಟರ್ ಅಂತರದಲ್ಲಿ ಮುಖಾಮುಖಿ ನಡೆಯಿತು. ನಕ್ಸಲರು ಪರಾರಿಯಾದರು. ಆದರೆ ಅಲ್ಲಿ ಶೋಧಿಸಿದಾಗ ಬೃಹತ್ ಟೆಂಟ್ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲಿ ನಕ್ಸಲ್ ಸಾಹಿತ್ಯ, ಅಡುಗೆ ಸಾಮಾಗ್ರಿಗಳು, ಪಾತ್ರೆಗಳು,ಪತ್ರಿಕೆಗಳು, ಚಪ್ಪಲಿಗಳು, ಸೋಪು, ಬಟ್ಟೆಗಳು, ಡೆಟೋನೋಟರ್ಸ್, ಕಾಟ್ರೇಜ್, ಅಕ್ಕಿ, ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಕ್ಸಲ್ ಭಾಷೆಯು ಕನ್ನಡ, ತಮಿಳು ಭಾಷೆಗಳಲ್ಲಿದ್ದು, ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆಗೆ ಈ ಭಾಗದ ಜನರು ಸಹಕರಿಸಬೇಕು ಎಂದರು.
ಇನ್ಸ್‌ಪೆಕ್ಟರ್‌ಗಳಾದ ನಾರಾಯಣ ಸ್ವಾಮಿ, ವಾಸುದೇವ ಮೂರ್ತಿ, ಎಸ್.ಎಸ್. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement