ರಸ್ತೆ ಕಾಮಗಾರಿ: ಭಾರಿ ವಾಹನ ಸಂಚಾರ ನಿರ್ಬಂಧ
ಕ.ಪ್ರ.ವಾರ್ತೆ, ಮೂಡಿಗೆರೆ, ಮೇ 16
ಪಟ್ಟಣ ಪಂಚಾಯಿತ್ ವ್ಯಾಪ್ತಿಯ ಕೆ.ಎಂ.ರಸ್ತೆಯ ಗಣಪತಿ ದೇವಸ್ಥಾನದಿಂದ- ಮಟನ್ ಮಾರ್ಕೇಟ್ವರೆಗೆ 700 ಮೀಟರ್ ಉದ್ದ ಹಾಗೂ 7 ಮೀಟರ್ ಅಗಲ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಲಾರಿಗಳು ಹಾಗೂ ಭಾರಿ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ತಾಲೂಕ್ ಪಂಚಾಯತ್ನಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಗುರುವಾರದ ದಿನವಾದ ಇಂದು ಕೆ.ಎಂ.ರಸ್ತೆ ಕಾಮಗಾರಿ ಬಗ್ಗೆ ತಾಲೂಕ್ ಪಂಚಾಯಿತ್ ಸಭಾಂಗಣದಲ್ಲಿ ನೂತನ ಶಾಸಕ ಬಿ.ಬಿ.ನಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ರಸ್ತೆ ಗುತ್ತಿಗೆದಾರರೊಂದಿಗೆ ಚರ್ಚಿಸಿ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಪಡೆಯಲಾಯಿತು.
ಸದ್ಯದಲ್ಲೆ ಮಳೆಗಾಲ ಪ್ರಾರಂಭವಾಗಲಿದ್ದು ಅದಕ್ಕೂ ಮುಂಚಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾಮಗಾರಿ ಮುಕ್ತಾಯ ವಾಗುವ ವರೆಗೂ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಆಗಬಾರದೆಂದು ಬದಲಿ ರಸ್ತೆಯಾದ ಮೂಡಿಗೆರೆ- ಕುನ್ನಹಳ್ಳಿ-ಹಳಸೆ- ಜನ್ನಾಪುರ ಮೂಲಕ ಸಾಗಿಸುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೇ ನೀಡಿದರು.
ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಡಾ.ಪ್ರಶಾಂತ್, ತಹಸೀಲ್ದಾರ್ ಎ.ವಿ.ರುದ್ರಪ್ಪಾಜಿ ರಾವ್, ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಮೇಕಾಲೆ, ತಾಲೂಕ್ ಪಂಚಾಯಿತ್ ಅಧ್ಯಕ್ಷ ಎ.ಎ.ಶೇಷಗಿರಿ, ರೈತಮುಖಂಡ ದುಗ್ಗಪ್ಪಗೌಡ, ಜಿ.ಪಂ.ಸದಸ್ಯರುಗಳಾದ ಜ್ಯೋತಿ ಹೇಮಶೇಖರ್, ಅನಂತ್, ತಾ.ಪಂ. ಮಾಜಿ ಅಧ್ಯಕ್ಷರುಗಳಾದ ಹಿತ್ಲಮಕ್ಕಿ ರಾಜೇಂದ, ರಂಜನ್ ಅಜಿತ್ ಕುಮಾರ್,ಪಟ್ಟಣ ಪಂಚಾಯಿತ್ಮುಖ್ಯಾಧಿಕಾರಿ ಗಣೇಶ್, ಸದಸ್ಯರುಗಳಾದ ಸುಬ್ರಾಯ, ಹೂವಮ್ಮ, ನೇಪಾ ಆದಿತ್ಯ, ವೃತ್ತ ನಿರೀಕ್ಷಕ ರಮೇಶ್, ಲೋಕೋಪಯೋಗಿ ಇಲಾಕೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.