ಉತ್ತಮ ಪರಿಸರಕ್ಕೆ ಅರಣ್ಯಾಭಿವೃದ್ಧಿ ಅಗತ್ಯ
ಕ.ಪ್ರ.ವಾರ್ತ್ಣೆ ದಾವಣಗೆರೆ ಮೇ 17
ರಾಷ್ಟ್ರೀಯ ಅರಣ್ಯ ನೀತಿಯಂತೆ ಅರಣ್ಯ ಪ್ರದೇಶವನ್ನು ಹೆಚ್ಚಿಸುವ ಗುರಿ ಹೊಂದಿದ್ದು, ಈ ಮೂಲಕ ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಶಿವನಗೌಡ ಹೇಳಿದರು.
ನಗರದ ಆಫೀಸರ್ಸ್ ಕ್ಲಬ್ನಲ್ಲಿ ಶುಕ್ರವಾರ ಕೃಷಿ, ಅರಣ್ಯ ಪ್ರೋತ್ಸಾಹ ಯೋಜನೆ ಅನುಷ್ಠಾನ ಕುರಿತ ಬಳ್ಳಾರಿ ವೃತ್ತ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಅರಣ್ಯ ನೀತಿಯಡಿ ಅರಣ್ಯ ಸಂಪತ್ತನ್ನು ಹೆಚ್ಚಿಸಲು ಇಲಾಖೆಯು ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಅರಣ್ಯ ಭೂಮಿಯಿಂದ ತುಂಬಿದ್ದ ನಮ್ಮ ದೇಶದಲ್ಲಿ ಇಂದು ಶೇ.33ರಷ್ಟು ಮಾತ್ರ ಅರಣ್ಯ ಉಳಿದಿದೆ. ಅರಣ್ಯ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಿದಲ್ಲಿ ಪರಿಸರದ ಸಮತೋಲನ ಕಾಪಾಡಲು ಸಾಧ್ಯ. ಅಂತರ್ಜಲದ ಮಟ್ಟವನ್ನೂ ಹೆಚ್ಚಿಸಲು ಇದರಿಂದ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ 2000ನೇ ಇಸ್ವಿಯಲ್ಲಿ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಜಾರಿಗೆ ತರಲಾಯಿತು ಎಂದು ಅವರು ತಿಳಿಸಿದರು.
ಸಸಿ ನೆಡಲು ಪ್ರೋತ್ಸಾಸ: ಯೋಜನೆಯಡಿ ಕೃಷಿಕರ ಜಮೀನುಗಳಲ್ಲಿ ಸಸಿ ನೆಟ್ಟು, ಅವುಗಳನ್ನು ಆರೈಕೆ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ. ರೈತರಿಗೆ ಉಚಿತವಾಗಿ ಸಸಿ ವಿತರಿಸಲಾಗುವುದು. ಯೋಜನೆಯನ್ವಯ ಮೂರು ವರ್ಷ ಮೇಲ್ಪಟ್ಟ ಪ್ರತಿ ಗಿಡಕ್ಕೆ 5 ಪ್ರೋತ್ಸಾಹಧನ ನೀಡಲಿದ್ದು, ಇದು ರೈತರಿಗೆ ವರವಾಗಲಿದೆ. ಆರ್ಥಿಕ ಸಬಲತೆ, ಜೀವನ ಭದ್ರತೆಯನ್ನು ಕಲ್ಪಿಸುವಲ್ಲೂ ಇದು ಸಹಾಯಕ ವಾಗಲಿದೆ ಎಂದು ಅವರು ಹೇಳಿದರು.
ಸಸಿ ವಿತರಣೆ: ಭೂಮಿಯ ಸಮೀಕ್ಷೆ ನಡೆಸಿ, ಸಸಿಗಳ ಬೇಡಿಕೆಗೆ ಅನುಗುಣವಾಗಿ ಆಸಕ್ತ ರೈತರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಗ್ರಾಮ ಅರಣ್ಯ ಸಮಿತಿ ಹಾಗೂ ಪರಿಸರ ಅಭಿವೃದ್ಧಿ ಸಮಿತಿ ಮುಖಾಂತರ ಸಸಿ ವಿತರಿಸ ಲಾಗುತ್ತದೆ. ತಡವಾಗಿ ಸಸಿಗಳು ಸಿಕ್ಕ ಕಾರಣ ಕಳೆದ ಸಾಲಿನಲ್ಲಿ ಶೇ.47ರಷ್ಟು ಸಸಿ ಮಾತ್ರ ಬೆಳೆದಿವೆ. ಯೋಜನೆಯನ್ನು ಪರಿಣಾಮಕಾರಿಯಾಗಿಸಲು ಸರ್ಕಾರೇತರ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ ಎಂದು ಅವರು ವಿವರಿಸಿದರು.
1 ಕೋಟಿ ಸಸಿ: ಬೆಂಗಳೂರಿನ ಸುಮಂಗಲಿ ಸೇವಾಶ್ರಮ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ 1 ಕೋಟಿ ಸಸಿ ವಿತರಿಸಲು ಉದ್ದೇಶಿಸಿದ್ದು, ದಾವಣಗೆರೆ ಜಿಲ್ಲೆಗೆ 10 ಲಕ್ಷ ಸಸಿ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 7.5 ಲಕ್ಷ ಹೆಬ್ಬೇವಿನ ಸಸಿ, 3 ಲಕ್ಷ ಹುಣಸೆ ಸಸಿ, 5 ಸಾವಿರ ತೆಂಗಿನ ಸಸಿ ವಿತರಿಸಿದೆ. ಯೋಜನೆಯ ಯಶಸ್ಸಿಗೆ ರೈತರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇಲಾಖೆಯ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಶ್ಚಂದ್ರ ರೇ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಆಗ್ರೋ ಫಾರೆಸ್ಟ್ರಿ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಎ.ಎಸ್. ಸದಾಶಿವಯ್ಯ, ಮಾಜಿ ಅಧ್ಯಕ್ಷ ಎನ್. ಸಂಪಂಗಿ, ದಾವಣಗೆರೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎನ್. ಮಳವಳ್ಳಿ, ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.