ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಖಾರವಾದ ಶುಂಠಿ: ರೈತರ ಹರ್ಷ

Vishwanath S
Updated On : 19 May 2013, 1:19 am

ನರಸಿಂಹರಾಜಪುರ: ಶುಂಠಿ ಈ ಬಾರಿ ತುಂಬಾ ಖಾರವಾಗಿದೆ. ಒಂದು ಕೆಜಿ ಶುಂಠಿಯ ಬೆಲೆ 100ರಿಂದ 150 ರುಪಾಯಿ ವರೆಗೂ ಇದೆ. ಇತಿಹಾಸದಲ್ಲೇ ಇದೊಂದು ದಾಖಲೆ ಬೆಲೆಯಾಗಿದೆ.
 ಆದರೆ, ರೈತರ ದುರಾದೃಷ್ಟವೆಂದರೆ ಶುಂಠಿ ಬೆಳೆ ಇಲ್ಲದಾಗ ಮಾತ್ರ ದಾಖಲೆ ಬೆಲೆ ಇರುತ್ತದೆ. ಬೆಳೆ ದಾಸ್ತಾನು ಇದ್ದಾಗ ಧಾರಣೆ ಪಾತಾಳಕ್ಕೆ ಕುಸಿಯುತ್ತದೆ. ಈಗ ರೈತರ ಹತ್ತಿರ ಶುಂಠಿ ಇಲ್ಲ. ತಾಲೂಕಿನಲ್ಲಿ ಕೆಲವೇ ರೈತರ ಹತ್ತಿರ ಮಾತ್ರ ಶುಂಠಿ ದಾಸ್ತಾನು ಇದೆ. ಉಳಿದ ರೈತರು ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಕೆಜಿಗೆ 50 ರುಪಾಯಿಗೆ ಏರಿದ ಕೂಡಲೇ ಮಾರಾಟ ಮಾಡಿದ್ದಾರೆ. ಜೊತೆಗೆ ಕಳೆದ ವರ್ಷ ಶುಂಠಿಗೆ ಕೊಳೆ ರೋಗ ಬಂದಿದ್ದು ಶುಂಠಿ ಇಳುವರಿಯಲ್ಲಿಯೂ ಕುಸಿತವಾಗಿತ್ತು.
6ರಿಂದ 150 ರುಪಾಯಿವರೆಗೆ: ಕೇರಳದಿಂದ ವಲಸೆ ಬಂದು ಇಲ್ಲಿ ಕೃಷಿ ಮಾಡಲು ಪ್ರಾರಂಭಿಸಿದ ಮಲೆಯಾಳಿ ರೈತರು ಹಸಿ ಹುಲ್ಲು, ರಬ್ಬರ್, ನೇಂದ್ರ ಬಾಳೆ ಜೊತೆಗೆ ಶುಂಠಿಯನ್ನು ಲಾಭದಾಯಿಕವಾಗಿ ಹೇಗೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟರು. ರೈತರ ಹಿತ್ತಲಲ್ಲಿ ನೀರಿಲ್ಲದ ಮಕ್ಕಿ ಗದ್ದೆಗಳಲ್ಲಿ, ಖಾಲಿ ಬಿದ್ದಿರುವ ಒಣ ಭೂಮಿಗಳಲ್ಲಿ, ಹೊಸದಾಗಿ ಪ್ರಾರಂಭಿಸಿರುವ ಅಡಕೆ ತೋಟ ಹಾಗೂ ರಬ್ಬರ್ ತೋಟಗಳಲ್ಲಿ ಉಪ ಬೆಳೆಯಾಗಿ ಶುಂಠಿಯನ್ನು ಬೆಳೆಯಬಹುದಾಗಿದೆ. ಕೆಲವು ವರ್ಷಗಳ ಹಿಂದೆ ಶುಂಠಿ 1 ಕೆಜಿಗೆ 6 ರುಪಾಯಿಯಿಂದ 10 ರುಪಾಯಿ ವರೆಗೆ ಧಾರಣೆ ಇತ್ತು. 3 ವರ್ಷದ ಹಿಂದೆ ಹಸಿ ಶುಂಠಿಯ ಧಾರಣೆ ಏರಿಕೆ ಉಂಟಾಗಿ 1 ಕೆಜಿಗೆ 80 ರುಪಾಯಿಗೆ ಏರಿತ್ತು. ಮತ್ತೆ ಇಳಿಯಲಾರಂಭಿಸಿದ ಶುಂಠಿ ಕಳೆದ ವರ್ಷ 25 ರಿಂದ 30 ರುಪಾಯಿವರೆಗೆ ಧಾರಣೆ ಇತ್ತು.
ಉತ್ತಮ ಧಾರಣೆ: ಕಳೆದ ವರ್ಷ ನವಂಬರ್, ಡಿಸೆಂಬರ್ ತಿಂಗಳಲ್ಲಿ ಶುಂಠಿ ಧಾರಣೆ 25 ರಿಂದ 30 ರುಪಾಯಿ ವರೆಗೆ ಮಾತ್ರ ಇತ್ತು. ಸಾಮಾನ್ಯವಾಗಿ ಶುಂಠಿಯನ್ನು ಭೂಮಿಯಿಂದ ಕೀಳುವುದೇ ನವಂಬರ್, ಡಿಸೆಂಬರ್ ತಿಂಗಳಲ್ಲಿ. ಆ ಸಮಯದಲ್ಲಿ ಉತ್ತಮ ಧಾರಣೆ ಸಿಕ್ಕಿದರೆ ರೈತರಿಗೆ ಲಾಭದಾಯಕವಾಗುತ್ತದೆ. ಧಾರಣೆ ಇಲ್ಲದಿದ್ದರೆ ಮಾರ್ಚ್, ಏಪ್ರಿಲ್ ತಿಂಗಳವರೆಗೂ ಶುಂಠಿಯನ್ನು ಭೂಮಿಯಲ್ಲೇ ಬಿಟ್ಟು ನಂತರ ಕಿತ್ತು ಮಾರಾಟ ಮಾಡುವ ರೈತರು ಇದ್ದಾರೆ. ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಶುಂಠಿ ಬೆಲೆ 50ರ ಗಡಿ ದಾಟಿದ ನಂತರ ರೈತರು ಇದ್ದ ಬದ್ದ ಶುಂಠಿಯನ್ನು ಮಾರಾಟ ಮಾಡಿಬಿಟ್ಟಿದ್ದಾರೆ. ಕಳೆದ 1 ತಿಂಗಳ ಹಿಂದೆ ಏಕಾ ಏಕಿ ಶುಂಠಿ ಬೆಲೆ ಏರುತ್ತ 125 ರುಪಾಯಿ ದಾಟಿ 150 ರ ಆಸು ಪಾಸಿನಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಕಳೆದ 10 ದಿನದಿಂದ ಮತ್ತೆ ಇಳಿಮುಖವಾಗಿ ಈಗ ಕೆಜಿಗೆ 100 ರುಪಾಯಿಗೆ ಸ್ಥಿರವಾಗಿದೆ.
ಲೀಸ್‌ಗೆ ಭೂಮಿ: ಕೇರಳದಿಂದ ಬಂದ ರೈತರು ಶುಂಠಿ ಬೆಳೆಯಲು ಲೀಸ್ ಮೇಲೆ ಒಂದು ಎಕರೆಗೆ 25 ಸಾವಿರದಿಂದ 40 ಸಾವಿರ ರುಪಾಯಿ ವರೆಗೂ ಭೂಮಿ ಪಡೆಯುತ್ತಾರೆ. ನೀರಿನ ಸೌಲಭ್ಯ, ಬೇಲಿ ಸೌಕರ್ಯ ಇರುವ ಖಾಲಿ ಒಣ ಭೂಮಿ, ಮಕ್ಕಿ ಗದ್ದೆ, 3 ವರ್ಷದ ಒಳಗಿನ ರಬ್ಬರ್ ತೋಟಗಳು ಶುಂಠಿ ಬೆಳೆಯಲು ಹೆಚ್ಚು ಅನುಕೂಲವಾಗುತ್ತದೆ. ಒಂದು ಎಕರೆ ಭೂಮಿಯಲ್ಲಿ ಶುಂಠಿ ಬೆಳೆಯಲು 1 ಲಕ್ಷ ರುಪಾಯಿ ವರೆಗೂ ಖರ್ಚು ಮಾಡುವ ರೈತರಿದ್ದಾರೆ. ಒಂದು ಎಕರೆಗೆ ನೆಡಲು 5 ಕ್ವಿಂಟಲ್ ಶುಂಠಿ ಬೇಕು. ಪ್ರತಿ ತಿಂಗಳು ರಸಗೊಬ್ಬರ ನೀಡಬೇಕು. ಹಟ್ಟಿ ಗೊಬ್ಬರ, ಮುಚ್ಚಲು ಸೊಪ್ಪು, ಕಾಲ ಕಾಲಕ್ಕೆ ನೀರು ನೀಡಬೇಕಾಗುತ್ತದೆ.
ರೈತರು ಪಾಪರ್: ಜೊತೆಗೆ ಕಳೆ ತೆಗೆಯಬೇಕು. ಸರಿಯಾಗಿ ಕೃಷಿ ಮಾಡಿದರೆ ಒಂದು ಎಕರೆಯಲ್ಲಿ 100 ರಿಂದ 150 ಕ್ವಿಂಟಲ್ ವರೆಗೂ ಬೆಳೆ ತೆಗೆಯಬಹುದು. ಈ ವರ್ಷದ ಧಾರಣೆಯಲ್ಲಿ ಸರಾ ಸರಿ ಒಂದು ಎಕರೆಯಲ್ಲಿ ಖರ್ಚು ಕಳೆದರೂ 5 ಲಕ್ಷ ಆದಾಯ ನಿರೀಕ್ಷಿಸಬಹುದಾಗಿದೆ. ಆದರೆ, ಶುಂಠಿಗೆ ವಿಪರೀತ ಖಾಯಿಲೆ, ಕೊಳೆ ರೋಗ, ಸ್ಥಿರವಿಲ್ಲದ ಮಾರುಕಟ್ಟೆಯಿಂದಾಗಿ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಪಾಪರ್ ಆದ ರೈತರೂ ಇದ್ದಾರೆ.
ಝಣ ಝಣ ಕಾಂಚಾಣ: ಈ ವರ್ಷ ಏರಿದ ಶುಂಠಿ ಧಾರಣೆ ತಾಲೂಕಿನ ಕೆಲವೇ ರೈತರಿಗೆ ಸಿಕ್ಕಿದೆ. ಉತ್ತಮ ಧಾರಣೆ ನಿರೀಕ್ಷೆಯಲ್ಲಿದ್ದ ಕೆಲವು ರೈತರು ಭೂಮಿಯಿಂದ ಶುಂಠಿ ಕೀಳದೆ ಹಾಗೇ ಬಿಟ್ಟಿದ್ದರು. ಈಗ ಏರಿದ ಧಾರಣೆಯಿಂದ ಶುಂಠಿ ಕಿತ್ತು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಶುಂಠಿ ಏರಿದ ದಾಖಲೆ ಬೆಲೆ ನೋಡಿ ನೂರಾರು ರೈತರು ಮತ್ತೆ ಶುಂಠಿ ಬೆಳೆಯತ್ತ ಮುಖ ಮಾಡಿದ್ದಾರೆ.
 ತಾಲೂಕಿನ ಇತಿಹಾಸದಲ್ಲಿ ಶುಂಠಿ ಬೆಳೆದ ರೈತರು ಶ್ರೀಮಂತರು ಆಗಿದ್ದಾರೆ. ಶುಂಠಿ ಬೆಳೆಯಲು ಹೋಗಿ ಕೈ ಸುಟ್ಟುಕೊಂಡು ಕೆಲವು ರೈತರು ಸಾಲಗಾರರಾಗಿದ್ದಾರೆ ಎನ್ನುತ್ತಾರೆ ಕೃಷಿಕ ರಬ್ಬರ್ ಪೌಳಿ.

-ಯಡಗೆರೆ ಮಂಜುನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement