ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರಬುದ್ಧತೆ ಪ್ರದರ್ಶಿಸಿದ ಮತದಾರ: ಭಾನುಪ್ರಕಾಶ

Vishwanath S
Updated On : 19 May 2013, 1:20 am

ಕ.ಪ್ರ.ವಾರ್ತೆ, ಕೊಪ್ಪ, ಮೇ 18
ಅಭಿವೃದ್ಧಿ ಸಾಧನೆಯಿಂದ ಉತ್ತಮ ಹೆಸರು ಪಡೆದಿರುವ, ಭ್ರಷ್ಟಾಚಾರದ ಕಳಂಕವಿಲ್ಲದ ಜೀವರಾಜ್ ಅವರನ್ನು ಗೆಲ್ಲಿಸುವ ಮೂಲಕ ಶೃಂಗೇರಿ ಕ್ಷೇತ್ರದ ಮತದಾರರು ಪ್ರಬುದ್ಧತೆ ಪ್ರದರ್ಶಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ವಿಪ ಸದಸ್ಯ ಎಂ.ಬಿ. ಭಾನುಪ್ರಕಾಶ ತಿಳಿಸಿದರು.
 ಶೃಂಗೇರಿ ಕ್ಷೇತ್ರದಲ್ಲಿ 3ನೇ ಬಾರಿ ಜಯಗಳಿಸಿದ ಡಿ.ಎನ್. ಜೀವರಾಜ್ ಗೆಲವಿನ ಪ್ರಯುಕ್ತ ತಾಲೂಕು ಬಿಜೆಪಿ ವತಿಯಿಂದ ಇಲ್ಲಿನ ಪುರಭವನದಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವದ ಸಮಾರಂಭದಲ್ಲಿ  ಮಾತನಾಡಿದ ಅವರು ನಮ್ಮಿಂದ ತಪ್ಪಾಗಿದ್ದನ್ನು ಒಪ್ಪಿಕೊಳ್ಳುತ್ತೇವೆ ಎಂದರು.
ಖುಷಿಯಿಂದ ಮೈಮರೆತರು: ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದಾಗ ಖುಷಿಯಲ್ಲಿ ಪ್ರಮುಖ ನಾಯಕರು ಮೈಮರೆತರು. ತಮ್ಮಿಂದಲೇ ಪಕ್ಷ ಗೆದ್ದಿದೆ ಎಂಬ ಭ್ರಮೆಯಲ್ಲಿದ್ದ ಅವರ ತಪ್ಪಿನಿಂದ ಪಕ್ಷ ಹೋಳಾಯಿತು. ಮತದಾರ ನೀಡಿದ ಶಿಕ್ಷೆಗೆ ತಲೆಬಾಗುತ್ತೇವೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಎಂದೂ ಜನರಿಗೆ ದ್ರೋಹ ಮಾಡಿಲ್ಲ ಎಂದರು.
 ಪಕ್ಷದ ಆಂತರಿಕ ವಿಚಾರದಲ್ಲಿ ನಮ್ಮಿಂದ ತಪ್ಪಾಗಿದೆ ನಿಜ. ಅದಕ್ಕೆ ತಕ್ಕ ಶಿಕ್ಷೆಯನ್ನೂ ಕೊಟ್ಟಿದ್ದೀರಿ. ಮುಂದೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇವೆ. ನಾನು ನನ್ನಿಂದಲೇ ಪಕ್ಷ ಎನ್ನುತ್ತಿದ್ದವರಿಗೆ ಮತದಾರರು ಸರಿಯಾಗಿ ಬುದ್ದಿ ಕಲಿಸಿದ್ದಾರೆ ಎಂದರು.
  ಲೋಕಸಭಾ ಚುನಾವಣೆಯ ದೊಡ್ಡ ಸಮರ ಎದುರಿಗಿದೆ. ಮೋದಿಯಂತಹ ಜನನಾಯಕರು ದೇಶದ ಪ್ರಧಾನಿಯಾಗಲು ಚುನಾವಣೆ ಗೆಲವಿಗಾಗಿ ಈಗಿನಿಂದಲೇ ತಯಾರಿ ನಡೆಸಬೇಕಾಗಿದೆ ಎಂದರು.
ಅಪಪ್ರಚಾರದ ಎದುರು ಜಯ: ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ಈ ಬಾರಿ ಚುನಾವಣೆಯಲ್ಲಿ ಅಭಿವೃದ್ಧಿ  ಮತ್ತು ಕಾರ್ಯಕರ್ತರ ಬಲದೊಂದಿಗೆ ಕಾಂಗ್ರೇಸ್‌ನವರ ಅಪಪ್ರಚಾರ ಮತ್ತು ಹಣ ಬಲದ ಎದುರು ವಿಜಯ ಸಾಧಿಸಿದ್ದೇವೆ ಎಂದರು.
 ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ಅಡಕೆ ಬೆಳೆಗಾರರ ಸಮಸ್ಯೆಯನ್ನು ಕಾಂಗ್ರೇಸ್‌ನವರು ಬಗೆಹರಿಸಲಿ. ಇಲ್ಲದೆ ಇದ್ದರೆ ಜನರೇ ಬುದ್ದಿ ಕಲಿಸುತ್ತಾರೆ ಎಂದರು. ನಿಮ್ಮ ನಿರೀಕ್ಷೆಗೆ ತಕ್ಕಂತೆ ರಚನಾತ್ಮಕ ಕೆಲಸ ಮಾಡಿ, ಸ್ವಾಭಿಮಾನಿ ಶೃಂಗೇರಿ ಕ್ಷೇತ್ರದ ಘನತೆಯನ್ನು ಎತ್ತಿ ಹಿಡಿಯುತ್ತೇನೆ ಎಂದರು.
 ಇದೇ ಸಂದರ್ಭದಲ್ಲಿ ಜೀವರಾಜ್ ಅವರಿಗೆ ಮೈಸೂರು ಪೇಟ ತೊಡಿಸಿ ಬೆಳ್ಳಿಯ ಖಡ್ಗ ನೀಡಿ ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎಂ.ಕೆ. ಪ್ರಾಣೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎನ್. ರಾಮಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಜಿ.ಎಸ್. ಮಹಾಬಲ, ಮುಖಂಡ ಬಿ.ಕೆ. ಗಣೇಶ್ ರಾವ್, ಕುಕ್ಕಡಿಗೆ ರವೀಂದ್ರ, ಸುಚಿತ ನರೇಂದ್ರ, ಅನ್ನಪೂರ್ಣ ಚನ್ನಕೇಶವ, ಪದ್ಮಾವತಿ, ಕೆಸವೆ ಶಾಂತರಾಮ್, ನೀಲೇಶ್, ಮಳಿಗೆ ಚಂದ್ರಶೇಖರ್, ಬಿ.ಆರ್. ನಾರಯಾಣ್, ಹೊಸೂರು ದಿನೇಶ್, ಅದ್ದಡ ಸತೀಶ್, ಪುಣ್ಯಪಾಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement