ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೆಸ್ಕಾಂ ಅಧಿಕಾರಿಗಳೊಂದಿಗೆ ಶಾಸಕರ ಸಭೆ

Vishwanath S
Updated On : 19 May 2013, 1:20 am

ಕಡೂರು: ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ವಿದ್ಯುತ್ ಸಂಪರ್ಕಕ್ಕೆ ಮೆಸ್ಕಾಂ ಇಲಾಖೆ ನಿಗಧಿ ಪಡಿಸಿರುವ ಹೊಸ ನಿಯಮದಿಂದ ಗುತ್ತಿಗೆದಾರರು ಗ್ರಾಹಕರಿಗೆ ಸರಿಯಾಗಿ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಸಮಸ್ಯೆ ಬಗೆಹರಿಸಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ವೈ.ಎಸ್.ವಿ. ದತ್ತರವರಿಗೆ ಗುತ್ತಿಗೆದಾರರ ಸಂಘ ಮನವಿ ನೀಡಿದೆ.
 ಈ ಕುರಿತು ಶಾಸಕರು ಮೆಸ್ಕಾಂ ಇಲಾಖೆಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪಟ್ಟಣದ ಮೆಸ್ಕಾಂ ಇಲಾಖೆಯ ವಿಭಾಗೀಯ ಹಿರಿಯ ವ್ಯವಸ್ಥಾಪಕ ಕರಿಸಿದ್ದಯ್ಯರೊಂದಿಗೆ ಗುತ್ತಿಗೆದಾರರ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಕಳೆದ 8 ತಿಂಗಳಿಂದ ವಿದ್ಯುತ್ ಬಳಕೆದಾರರ ಗ್ರಾಹಕರಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ನೀಡಲು ತೊಂದರೆ ಉಂಟಾಗುತ್ತಿದೆ. ಇಂಟರ್ ನೆಟ್ ಮೂಲಕ ಹೊಸ ವಿದ್ಯುತ್ ಸಂಪರ್ಕಕ್ಕೆ ಗುತ್ತಿಗೆದಾರರು ನೊಂದಣೆ ಮಾಡಿಸಬೇಕು ಎಂಬ ನಿಯಮ ಜಾರಿಗೆ ತಂದಿರುವುದರಿಂದ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಕೂಡುವುದು ತಿಂಗಳುಗಟ್ಟಲೆಯಾಗುತ್ತಿದೆ. ಅಲ್ಲದೆ  ಇಂಟರ ನೆಟ್ ಸರ್ವರ್ ನಿಧಾನವಾಗಿ ಮತ್ತಷ್ಟು ವಿಳಂಬವಾಗುವ ಮೂಲಕ ಗ್ರಾಹಕರಿಂದ ಮಾತುಗಳನ್ನು ಕೇಳಬೇಕಾಗಿದೆ. ಈ ಬಗ್ಗೆ ಮೂರು ಭಾರಿ ಪ್ರತಿಭಟನೆ ಮಾಡಿ ಮನವಿ ನೀಡಿದರೂ ಇಲಾಖೆಯಿಂದ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
 ಶಾಸಕ ವೈ.ಎಸ್.ವಿ. ದತ್ತ, ಹಿಂದಿನ ಪದ್ಧತಿಯಿಂದ ವಿದ್ಯುತ್ ಸಂಪರ್ಕಕ್ಕೆ ಅವಕಾಶ ಮಾಡಿದರೆ ಗುತ್ತಿಗೆದಾರರಿಗೆ ಅನುಕೂಲವಾಗುತ್ತದೆ. ವ್ಯವಸ್ಥೆ ಸರಿಪಡಿಸುವತನಕ ಗುತ್ತಿಗೆದಾರರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕು. 27 ರೊಳಗೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ 28 ರಂದು ಕಡೂರು ತಾಲೂಕಿನ ಎಲ್ಲ ವಿದ್ಯುತ್ ಗುತ್ತಿಗೆದಾರರನ್ನು ಬೆಂಗಳೂರಿಗೆ ನಿಯೋಗ ಕರೆದುಕೊಂಡು ಹೋಗಿ ಗುತ್ತಿಗೆದಾರರ ಕೆಲಸ ನಿರ್ವಹಣೆಗೆ ಅಡಚಣೆ ಆಗದಂತೆ ಸರ್ಕಾರ ಅನುಕೂಲ ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
 ಮೆಸ್ಕಾಂ ಹಿರಿಯ ಅಧಿಕಾರಿ ಶಿವಕುಮಾರ್‌ರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಇಂಟರ್ ನೆಟ್ ಸರಿಪಡಿಸಿ ಅಗತ್ಯ ಸಿಬ್ಬಂದಿ ನೇಮಕ ಮಾಡಿ ಮತ್ತು ಕೊರತೆ ಇರುವ 14 ಜನ ಜೂನಿಯರ್ ಎಂಜಿನಿಯರ್ ಸೇರಿದಂತೆ ಸಿಬ್ಬಂದಿಯನ್ನು ನೇಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು. ಮೆಸ್ಕಾಂ ಎಇಇ ಪರಶುರಾಮ್, ಸಂಘದ ಅಧ್ಯಕ್ಷ ವೈ.ಟಿ. ರಮೇಶ್,ನಾಗರಾಜ್, ನಜೀರ್, ಮುರಳಿ (ಅಪ್ಪು), ಲೋಕೇಶ್, ಶ್ರೀನಿವಾಸ್. ಬಸವರಾಜು, ರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement