ಕಾರ್ಮಿಕರ ಖಾತೆಗೆ ನೇರ ಹಣ ಜಮಾ
ನರಸಿಂಹರಾಜಪುರ: ಮಹಾತ್ಮಾ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹಣ ದುರುಪಯೋಗವಾಗದಂತೆ ತಡೆಗಟ್ಟಲು ನೂತನವಾಗಿ ಜಾರಿಗೆ ಬಂದಿರುವ ಪದ್ದತಿಯಂತೆ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಎ. ವಿಜಯಕುಮಾರ್ ತಿಳಿಸಿದರು.
ಇತ್ತೀಚೆಗೆ ತಾಪಂ ಆವರಣದ ಸಾಮರ್ಥ್ಯ ಸೌಧದಲ್ಲಿ ನಡೆದ ಮಹಾತ್ಮಾ ಗಾಂಧೀ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರಿಗೆ ಡೋಂಗಲ್ಸ್ ಕೀ ವಿತರಿಸುವ ಸಮಾರಂಭದಲ್ಲಿ ನೂತನ ಪದ್ದತಿ ಬಗ್ಗೆ ಮಾಹಿತಿ ನೀಡಿದರು.
ಹಿಂದೆ ಎಂಜಿಎನ್ಆರ್ಜಿಎ ಯೋಜನೆಯಡಿ ಗ್ರಾಪಂನಲ್ಲಿ ಹೆಸರು ನೋಂದಾಯಿಸಿ ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ಹಣವನ್ನು ಚೆಕ್ ಮೂಲಕ ಕಾರ್ಮಿಕರ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ, ಹೊಸ ಪದ್ದತಿಯ ಪ್ರಕಾರ ಕಾರ್ಮಿಕರ ಖಾತೆಗೆ ಹಣವನ್ನು ಜಮಾ ಮಾಡುವಾಗ ವಿದ್ಯುನ್ಮಾನ ಹಣ ವರ್ಗಾವಣೆ ಪದ್ದತಿ (ಇಎಫ್ಎಂಎಸ್) ನ್ನು ಅನುಸರಿಸಲಾಗುತ್ತದೆ.ಚೆಕ್ ಮೂಲಕ ಹಣ ಪಾವತಿಸುವಾಗ ಗ್ರಾಪಂ ಅಧ್ಯಕ್ಷರ ಮತ್ತು ಪಿಡಿಓಗಳ ಸಹಿಯ ದುರುಪಯೋಗವಾಗುವ ಸಾಧ್ಯತೆ ಇತ್ತು.
ಹೊಸ ಮಾದರಿಯ ಡೋಂಗಲ್ಸ್ ಕೀ ನಲ್ಲಿ ಇಬ್ಬರ್ ಮಾದರಿ ಡಿಜೆಟಲ್ ಸಹಿ ಇರುವುದರಿಂದ ಹಣ ದುರುಪಯೋಗವಾಗುವ ಸಾಧ್ಯತೆ ಇಲ್ಲ. ಗ್ರಾಪಂ ಪಿಡಿಓಗಳೆ ಜವಬ್ದಾರಿ ನಿರ್ವಹಿಸಬೇಕಾಗುತ್ತದೆ ಎಂದರು.
ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್ ಗ್ರಾಪಂ ಅಧ್ಯಕ್ಷ ಮತ್ತು ಪಿಡಿಓಗಳಿಗೆ ಡೋಂಗಲ್ಸ್ ಕೀ ವಿತರಿಸಿ ಮಾತನಾಡಿದರು. ತಾಪಂ ಲೆಕ್ಕಾಧಿಕಾರಿ ರಾಮಚಂದ್ರ, ಸಹಾಯಕ ನಿರ್ದೇಶಕ ಎಸ್.ಎಂ. ರಾಜೇಗೌಡ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.