ಕೃಪೆ ತೋರಿದ ವರುಣ
ಕ.ಪ್ರ.ವಾರ್ತ್ಣೆ ಕಡೂರ್ಣು ಮೇ 19 ಕಳೆದೆರಡು ದಿನಗಳಿಂದ ಬೀಳುತ್ತಿರುವ ಭಾರಿ ಮಳೆಯಿಂದ ಕಳೆದ ಹಲವು ತಿಂಗಳಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ತಲೆಮೇಲೆ ಕೈ ಹೊತ್ತು ಕುಳಿತಿದ್ದ ರೈತರು ಉತ್ಸುಕತೆಯಿಂದ ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ.
ಮುಂಗಾರು ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಸುಮಾರು 31,153 ಸಣ್ಣ, ಅತಿ ಸಣ್ಣ ರೈತರಿಗೆ ಎಕರೆಗೆ ಇಂತಿಷ್ಟು ಎಂದು ಸರ್ಕಾರ ಪರಿಹಾರದ ಹಣ ನೀಡಲಿದೆ. ಭರಣಿ ಮಳೆ ಸಮಯಕ್ಕೆ ಸರಿಯಾಗಿ ಬಾರದೆ ಅದರ ಹಿಂದಿನ ಮಳೆಗಳೂ ಕೂಡ ಕೈಕೊಟ್ಟು ಕಳೆದ ಆರೇಳು ವರ್ಷದಿಂದ ಬರಗಾಲದ ಬೇಗೆಯಲ್ಲಿ ಬೇಯುತ್ತಾ ಸಂಕಷ್ಟ ಎದುರಿಸುತ್ತಿದ್ದ ರೈತರು ಸ್ವಲ್ಪಮಟ್ಟಿಗೆ ಚೇತರಿಸಿಕೊಳ್ಳುವಂತಾಗಿದೆ.
ಹದವಾದ ನೆಲ: ತಾಲೂಕಿನ ಎಂಟು ಹೋಬಳಿಗಳಲ್ಲೂ ಬಿದ್ದ ಮಳೆಯಿಂದ ನೆಲ ಹದವಾಗಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆಯಲ್ಲಿ ತೊಡಗಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಮಳೆಗೆ ಹೈಬ್ರಿಡ್ ಜೋಳ, ಹೆಸರು, ಹಲಸಂದೆ, ಉದ್ದು, ತೊಗರಿ, ಹತ್ತಿ, ನೆಲಗಡಲೆ, ಸೂರ್ಯಕಾಂತಿ ಸೇರಿಂದಂತೆ ಕಾಳಿನ ಬೆಳೆಗಳನ್ನು ಬಿತ್ತುತ್ತಿದ್ದು, ಈ ಬಾರಿಯ ಬೆಳೆಗಳಾದರೂ ಕೈ ಹಿಡಿಯಲಿ ಎನ್ನುವ ಉತ್ಸಾಹದಲ್ಲಿದ್ದಾರೆ.
ಕೆಲಸವಿಲ್ಲದೆ ಕೈ ಚೆಲ್ಲಿ ಕುಳಿತಿದ್ದ ರೈತರಿಗೆ ಇದೀಗ ಕೃಷಿ ಚಟುವಟಿಕೆ ಕೈ ತುಂಬಾ ಕೆಲಸ ನೀಡಿದೆ. ಕೃಷಿ ಇಲಾಖೆಯ ಎಲ್ಲ 8 ಕೃಷಿ ಸಹಾಯಕ ಕೇಂದ್ರಗಳಲ್ಲಿಯೂ ಬಿತ್ತನೆ ಬೀಜ ದಾಸ್ತಾನು ಇದ್ದು, ಸಬ್ಸಿಡಿ ದರದಲ್ಲಿ ರೈತರಿಗೆ ಬೀಜ ಮತ್ತು ಗೊಬ್ಬರ ದೊರೆಯುತ್ತಿದೆ. ರು. 35 ಸಬ್ಸಿಡಿ ದರದಲಿ ಜೋಳ ದೊರಕಿದರೆ, ಸೂರ್ಯಕಾಂತಿ ರು. 80 ಸಬ್ಸಿಡಿ ದರದಲ್ಲಿ ಲಭ್ಯವಾಗುತ್ತಿದೆ.
ಬೀಜ, ಗೊಬ್ಬರ ದಾಸ್ತಾನು: ಎಲ್ಲ ಹೋಬಳಿ ಕೇಂದ್ರಗಳ ಕೃಷಿ ಸಹಾಯಕ ಕೇಂದ್ರಗಳಲ್ಲಿ ಬೀಜ ಗೊಬ್ಬರ ವಿತರಣೆಗೆ ರೈತರಿಗೆ ತೊಂದರೆಯಾಗದಂತೆ ಇಲಾಖೆ ಕ್ರಮ ಕೈಗೊಂಡು ದಾಸ್ತಾನು ಮಾಡಿದೆ. ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿಯೂ ಗೊಬ್ಬರಕ್ಕೆ ಕೊರತೆ ಬಾರದಂತೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.
ಅಂದಾಜಿನ ಪ್ರಕಾರ ತಾಲೂಕಿನ 69 ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಸುಮಾರು 6 ಸಾವಿರ ಹೆಕ್ಟೇರ್‌ನಲ್ಲಿ ಹೆಸರು ಕಾಳು ಬಿತ್ತನೆ ಮಾಡಲಾಗಿದೆ. ಜೋಳ, ಎಳ್ಳು ಮತ್ತು ಹೆಸರು ಈ ಬಾರಿ ಮಳೆಯಿಲ್ಲದ ಕಾರಣ ನಿರೀಕ್ಷೆಯಂತೆ ಬಿತ್ತನೆ ಆಗಿಲ್ಲ.
5 ಸಾವಿರ ಹೆಕ್ಟೆರ್ ಪ್ರದೇಶಗಳಲ್ಲಿ ಹೆಸರು ಬೆಳೆ ಮಾಡಬೇಕಿದ್ದು, ಕೇವಲ 1 ಸಾವಿರ ಹೆಕ್ಟರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗುತ್ತಿದೆ. ಅಲ್ಲದೆ ಸಂಪ್ರದಾಯದಂತೆ 4 ಸಾವಿರ ಹೆಕ್ಟರ್‌ನಲ್ಲಿ ಬಿತ್ತನೆಯಾಬೇಕಿದ್ದ ಎಳ್ಳು ಕೇವಲ 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ಒಟ್ಟಾರೆ ಸದ್ಯಕ್ಕೆ ಬಿದ್ದ ಮಳೆಯಿಂದ ತಾಲೂಕಿನ ರೈತರು ಹರ್ಷಗೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದೇ ಸದ್ಯದ ಸಮಾಧಾನದ ವಿಚಾರವಾಗಿದೆ.