ದೇವಸ್ಥಾನ ಪರಿವರ್ತನೆಯ ತಾಣ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಮೇ 19
ದೇವಸ್ಥಾನಗಳು ಪರಿವರ್ತನೆಯ ತಾಣಗಳು, ಸಂಸ್ಕಾರದ ಕೇಂದ್ರಗಳು ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಯಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಬೀರೂರು ಸಮೀಪ ಬಳ್ಳಿಗನೂರು- ಹೂವಿನಹಳ್ಳಿ ಶ್ರೀರಾಚೋಚಿ ವೀರಭದ್ರಸ್ವಾಮಿ ಅವರ ನೂತನ ದೇವಾಲಯ ಪ್ರವೇಶೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಗ್ರಹ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ ನೆರವೇರಿಸಿ ಧರ್ಮಚಿಂತನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಾರ್ಗದರ್ಶನ: ಜಗತ್ತನ್ನೆ ಲಿಂಗ ಸ್ವರೂಪವಾಗಿ ನೋಡಿದ ಲಿಂಗ ಪೂಜೆಯನ್ನು ಭೂಮಂಡಲದಲ್ಲಿ ಪ್ರಾರಂಭಿಸಿದ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ವಿಗ್ರಹ ಪ್ರತಿಷ್ಠಾಪಿಸಿರುವುದು ಸೂಕ್ತವಾಗಿದೆ. ಶ್ರೀರೇಣುಕಾಚಾರ್ಯರು ವೀರಶೈವ ಮಹಾಮತ ಸಂಸ್ಥಾಪಕರಾಗಿದ್ದು, ದಶ ಸೂತ್ರಗಳ ಮೂಲಕ ಮನುಕುಲಕ್ಕೆ ಮಾರ್ಗದರ್ಶನ ನೀಡಿದ್ದಾರೆ.
ಅಗಸ್ತ್ಯ ಮಹರ್ಷಿಗಳಿಗೆ ಬೋಧಿಸಿದ ರೇಣುಕ ಗೀತೆಗಳು ಸಿದ್ಧಾಂತ ಶಿಖಾಮಣಿ ಗ್ರಂಥವಾಗಿದ್ದು, ಇದು ವೀರಶೈವ ಧರ್ಮಗ್ರಂಥ ಎನಿಸಿಕೊಂಡಿದೆ. ಕಾಶೀ ಜಗದ್ಗುರುಗಳ ಪ್ರಯತ್ನದಿಂದಾಗಿ ಭಾರತೀಯ ಭಾಷೆಗಳಿಗೆಲ್ಲ ಅನುವಾದಗೊಳ್ಳುತ್ತಿದೆ ಎಂದು ಯಡೆಯೂರು ಶ್ರೀಗಳು ನುಡಿದರು.
ದೇವತಾರಾಧನೆ: ಹುಣಸಘಟ್ಟ ಮಠಾಧ್ಯಕ್ಷ ಶ್ರೀಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪೃಥ್ವಿ ತತ್ತ್ವದ ಅದಿ ನಾಯಕ ಜಗದ್ಗುರು ರೇಣುಕಾಚಾರ್ಯರ ಸ್ಥಾಪನೆಯಿಂದಾಗಿ ಸಮೃದ್ಧ ಮಳೆಯಾಗುತ್ತದೆ. ಮನೆಗಳಲ್ಲಿ ಸಂಬಂಧಗಳು ಸದೃಢಗೊಳ್ಳಲು ದೇವತಾರಾಧನೆ ಸಹಕಾರಿ ಎಂದರು. ಬೀರೂರು ಮಠಾಧ್ಯಕ್ಷ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ರಾಚೋಟಿ ವೀರಭದ್ರಸ್ವಾಮಿ ವಾಸ್ತವವಾಗಿ ಶಾಂತ ಮತ್ತು ಸೌಮ್ಯ ಸ್ವರೂಪಿ. ನಿರ್ಮಲ ಭಕ್ತಿ, ಶ್ರದ್ಧೆ ಇಲ್ಲಿ ಅಗತ್ಯ ಎಂದು ಹೇಳಿದರು.
ತಾವರೆಕೆರೆ ಶಿಲಾಮಠಾಧ್ಯಕ್ಷ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವರ ಗೋತ್ರಪುರುಷ ವೀರಭದ್ರಸ್ವಾಮಿ. ಮಾತೆಯರನ್ನು ರಕ್ಷಿಸಿದ ಮೊದಲ ದೈವಾಂಶಸಂಭೂತ ಎಂಬುದು ಋಗ್ವೇದದಲ್ಲಿ ಉಲ್ಲೇಖವಾಗಿದೆ. ದೃಷ್ಟಿಗೆ ತಕ್ಕ ಸೃಷ್ಟಿ ಎಂಬುದನ್ನು ಅರಿತು ಅರ್ಪಣೆ ಮತ್ತು ಅರ್ಚನೆ ಮಾಡಿದಾಗ ಬದುಕು ಹಸನಾಗುತ್ತದೆ ಎಂದರು.
ದೇವಸ್ಥಾನದ ಸಮಿತಿ ಅಧ್ಯಕ್ಷ ಪತ್ರೆ ಸಿ. ಸದಾಶಿವನ್ ಮಾತನಾಡಿದರು. ವೀರಭದ್ರಪ್ಪ ಸ್ವಾಗತಿಸಿದರು, ರವಿಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದೇಶ್ ನಿರೂಪಿಸಿ ವಂದಿಸಿದರು.