ಮಳೆ- ಗಾಳಿಗೆ 25 ಮನೆಗಳು ಜಖಂ, ಭಾರಿ ಹಾನಿ
ಕ.ಪ್ರ.ವಾರ್ತೆ ಟಿ ಹರಪನಹಳ್ಳಿ ಟಿ ಮೇ 19
ಮಳೆ ಗಾಳಿಗೆ ಅಂದಾಜು 25 ಮನೆಗಳು ಜಖಂಗೊಂಡಿದ್ದು, ಇಬ್ಬರು ಗಾಯಗೊಂಡು ಲಕ್ಷಾಂತರ ರು.ಗಳ ನಷ್ಟ ಸಂಭವಿಸಿದ ಘಟನೆ ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಸಂಭವಿಸಿದೆ.
ಕುಣೆ ಮಾದಿಹಳ್ಳಿಯಲ್ಲಿ ಮಳೆಗಿಂತ ಗಾಳಿಯ ಆರ್ಭಟ ಹೆಚ್ಚಾಗಿದ್ದು, ಇಲ್ಲಿ 10 ಮನೆಗಳಿಗೆ ತೀವ್ರ ಹಾನಿಯಾಗಿದೆ. ಉಳಿದ 10 ಮನೆಗಳು ಬಾಗಶಃ ಜಖಂ ಗೊಂಡಿವೆ. ಗ್ರಾಮದಲ್ಲಿ ಹಾಗೂ ಹೊರವಲಯದಲ್ಲಿ ಒಟ್ಟು 18 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಂದಾಜು 35 ಬಣವಿಗಳು ಹಾರಿ ಹೋಗಿ ನೀರಲ್ಲಿ ನೆನೆದಿವೆ. ಅನೇಕ ಮರ -ಗಿಡಗಳು ನೆಲಕ್ಕುರುಳಿವೆ.
ಇಬ್ಬರಿಗೆ ಗಾಯ: ಭಾರಿ ಗಾಳಿಗೆ ಮನೆಯಲ್ಲಿ ಮಲಗಿದ್ದ ತಗಡು ಬಡಿದು ನಿಂಗಮ್ಮ ಎಂಬುವರ ಕೈ ಹಾಗೂ ಕಲ್ಲು ಬಡಿದು ಪವಿತ್ರ ಎಂಬಾಕೆಯ ತಲೆಗೆ ಗಾಯವಾಗಿದೆ. ಕೆಲವೊಂದು ಕುಟುಂಬಗಳು ಗ್ರಾಮದ ದುರ್ಗಮ್ಮನ ದೇವಸ್ಥಾನದಲ್ಲಿ ರಾತ್ರಿ ಕಳೆದಿವೆ. ಒಟ್ಟಿನಲ್ಲಿ ಕುಣೆ ಮಾದಿಹಳ್ಳಿ ಗ್ರಾಮವು ತತ್ತರಗೊಂಡಿದೆ. ತೆಲಿಗಿಯಲ್ಲಿ ಕೆಲವೊಂದು ಮನೆಗಳಿಗೆ ನೀರು ನುಗ್ಗಿದೆ. ಹಲುವಾಗಲು ಗ್ರಾಮದಲ್ಲಿ 3 ಮನೆಗಳು ಜಖಂ ಗೊಂಡಿವೆ.
ತಹಸೀಲ್ದಾರ ಚೆನ್ನಬಸಪ್ಪ ಅವರು ಕುಣೆ ಮಾದಿಹಳ್ಳಿಗೆ ಭಾನವಾರ ಭೇಟಿ ನೀಡಿ ಪರಿಶೀಲಿಸಿದರು. ಜಖಂಗೊಂಡ ಮನೆಗಳ ವಾರಸುದಾರರಿಗೆ ನಿಯಮದ ಪ್ರಕಾರ ಸೂಕ್ತ ಪರಿಹಾರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.