ರಸ್ತೆಗೆ ಬಂತು ಚರಂಡಿ ನೀರು...
ಕ.ಡ.ವಾರ್ತ್ಣೆ ಚಿಕ್ಕಮಗಳೂರ್ಣು ಮೇ 19
ಚಿಕ್ಕಮಗಳೂರು ನಗರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದಲ್ಲಿ ಕೋಟ್ಯಂತರ ರುಪಾಯಿ ಬಿಡುಗಡೆಯಾಗಿದ್ದು, ಹಲವು ರಸ್ತೆಗಳು ಡಾಂಬರೀಕರಣಗೊಂಡಿವೆ. ನಗರದ ಸ್ವಚ್ಛತೆಗಾಗಿ ನಗರಸಭೆ ಹಲವು ಕ್ರಮಗಳನ್ನು ಹಮ್ಮಿಕೊಂಡಿದೆ.
ಅವುಗಳಲ್ಲಿ, ಮನೆ ಮನೆಗಳಿಂದ ಕಸ ಸಂಗ್ರಹ, ಪ್ಲಾಸ್ಟಿಕ್ ಬಳಕೆ ನಿಷೇಧ, ಮಾಂಸ ಮಾರಾಟದ ಮಳಿಗೆಗಳು ಒಂದೆ ಸೂರಿನಲ್ಲಿ ಇರುವಂತೆ ಮಾರುಕಟ್ಟೆ ಸಂಕೀರ್ಣವನ್ನು ಸಹ ನಿರ್ಮಾಣ ಮಾಡಿದೆ. ಖಾಲಿ ನಿವೇಶನಗಳ ಸ್ವಚ್ಛತೆ. ಇದೆಲ್ಲಾ ಸರಿ ಆದರೆ, ಮಳೆ ಬಂದಾಗ ಮಾತ್ರ ನಗರದ ಕೆಲವು ರಸ್ತೆಗಳಲ್ಲಿ ಸಾರ್ವಜನಿಕರು ಓಡಾಡದ ಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಕಾರಣ ನಗರಸಭೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ.
ರಸ್ತೆಯಲ್ಲಿ ಮೋರಿ ನೀರು: ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಹಲವು ಬಡಾವಣೆಗಳಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಮಾಡುವವರು, ತಮ್ಮ ಮನೆಗಳ ಮಣ್ಣನ್ನು ಚರಂಡಿಗೆ ಹಾಕಿದ್ದರಿಂದ ಮಳೆಯ ನೀರು ಸರಾಗವಾಗಿ ಹೋಗದೆ ಜನರಿಗೆ ತೊಂದರೆಯಾಗುತ್ತಿದೆ.
ಮಳೆ ನಿಂತರೂ, ಚರಂಡಿ ನೀರು ಮಾತ್ರ ನಿಂತಿಲ್ಲ. ಶನಿವಾರ ಚಿಕ್ಕಮಗಳೂರು ನಗರದಲ್ಲಿ ಸುಮಾರು 5 ಗಂಟೆಗೂ ಹೆಚ್ಚು ಕಾಲ ಮಳೆ ಬಂದಿದೆ. ಕೆಲವು ಖಾಸಗಿ ಕಟ್ಟಡಗಳು ಹಾಕಿರುವ ಮಣ್ಣಿನಿಂದ ಮುಚ್ಚಿರುವ ಚರಂಡಿಗಳು ಕೊಳಚೆ ಮತ್ತು ಮಳೆಯ ನೀರು ಭಾನುವಾರವೂ ರಸ್ತೆಯ ಮೇಲೆ ಹರಿಯುತ್ತಿರುವುದು ಕಂಡು ಬಂದಿತು.
ಮನೆಗಳನ್ನು ಕಟ್ಟಲು ತೆಗೆದ ಮಣ್ಣನ್ನು ಬೇರೆಡೆಗೆ ಸಾಗಿಸುವ ಕೆಲಸ ಆಯಾಯ ಕಟ್ಟಡಗಳ ಮಾಲೀಕರು ಮಾಡಬೇಕು. ಆದರೆ, ಈ ಕೆಲಸ ಹಲವೆಡೆ ಆಗಿಲ್ಲ. ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಅದರ ಮೇಲೆ ಸಾರ್ವಜನಿಕರು ಓಡಾಡುತ್ತಿದ್ದಾರೆ.
ಇನ್ನು ಕೆಲವೆಡೆ ನಗರಸಭೆ ಚರಂಡಿ ನಿರ್ಮಾಣ ಮಾಡಿದ್ದು, ಕೆಲಸ ಅರ್ಧಕ್ಕೆ ನಿಂತ ಕಡೆಯಲ್ಲೂ ಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದಕ್ಕೆ ಕಾರಣ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಯಿಂದಾಗಿ ಈ ರೀತಿಯ ತೊಂದರೆಯಾಗುತ್ತಿದ್ದು, ರಾಜಕೀಯ ಲಾಭಕ್ಕಾಗಿ ಕೆಲವು ರಾಜಕೀಯ ಪಕ್ಷಗಳು ಮುಂದುವರೆದ ಕಾಮಗಾರಿಗೆ ಅಡ್ಡಿಪಡಿಸಿದ ಪರಿಣಾಮ ಈಗ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಪ್ರತಿದಿನ ಮಳೆ ಬರುತ್ತಿರುವುದರಿಂದ ಮುಂದಿನ ಮುಂಗಾರು ಮಳೆಯಿಂದ ನಗರದ ಜನರಿಗೆ ಇನ್ನಷ್ಟು ತೊಂದರೆಯಾಗುವ ಸಾಧ್ಯತೆ ಇದೆ. ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ನಗರಸಭೆ ಕ್ರಮ ಕೈಗೊಳ್ಳಬೇಕು. ಕಟ್ಟಡದ ಮಣ್ಣನ್ನು ಬೇರೆಡೆಗೆ ಸಾಗಿಸಲು ಮಾಲೀಕರಿಗೆ ಸೂಚನೆ ನೀಡಬೇಕು.