ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಚನದ ಸಾರ ಅಳವಡಿಸಿಕೊಳ್ಳಿ

Rashmi Kasaragodu
Updated On : 20 May 2013, 11:01 am

ಕ.ಪ್ರ.ವಾರ್ತೆ ಟಿ ದಾವಣಗೆರೆ ಟಿ  ಮೇ 19
ವೀರಶೈವ ಎಂಬುದು ಒಂದು ಜಾತಿಯಾಗಿರದೆ, ಅದೊಂದು ಧರ್ಮವಾಗಿದೆ. ಇಂತಹ ಧರ್ಮ ಎಲ್ಲ ಸಮಾಜವನ್ನೂ ತನ್ನೊಂದಿಗೆ ಕೊಂಡೊಯ್ಯಲಿ ಎಂದು ಹರಿಹರ ಶಾಸಕ ಎಚ್.ಎಸ್. ಶಿವಶಂಕರ ಕರೆ ನೀಡಿದ್ದಾರೆ.
ನಗರದ ಕೆಇಬಿ ಸಭಾ ಭವನದಲ್ಲಿ ಭಾನುವಾರ ಕವಿಪ್ರನಿನಿ ವೀರಶೈವ ಲಿಂಗಾಯಕ ನೌಕರರ ಸಂಘ, ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಏರ್ಪಡಿಸಿದ್ದ ಬಸವ ಜಯಂತಿಯಲ್ಲಿ ಮಾತನಾಡಿದ ಅವರು, ವೀರಶೈವ ಸಮಾಜ ಎಲ್ಲಾ ಸಮಾಜಗಳನ್ನೂ ತನ್ನೊಟ್ಟಿಗೆ ಕೊಂಡೊಯ್ಯುವ ಮೂಲಕ ಸಮಾನ ಸಮಾಜದ ಪರಿಕಲ್ಪನೆಗೆ ಅರ್ಥ ಕಲ್ಪಿಸಬೇಕಿದೆ ಎಂದರು.
ಅರ್ಹರಿಗೆ ಸೌಲಭ್ಯ ತಲುಪಿಸಿ: ಅಂತರಂಗ, ಬಹಿರಂಗ ಶುದ್ಧವಾಗಿಟ್ಟುಕೊಂಡು ಜನರ ಬಳಿ ನಾವು ಹೋಗಬೇಕಿದೆ. ಬಸವಣ್ಣನ ವಚನ ಹೇಳಿದರಷ್ಟೇ ಸಾಲದು, ವಚನದ ಸಾರವನ್ನು ಜೀವನದಲ್ಲಿ ಅಳಡಿಸಿಕೊಳ್ಳಬೇಕು. ಆಗ ಮಾತ್ರ ಸಮಾಜವನ್ನು ಸನ್ಮಾರ್ಗಕ್ಕೆ ತರಲು ಸಾಧ್ಯ. ಕೆಲವೇ ಜಾತಿಯಲ್ಲಿ ಬಡವರಿದ್ದಾರೆಂಬುದು ಸರಿಯಲ್ಲ. ಎಲ್ಲಾ ಜಾತಿ, ಧರ್ಮೀಯರಲ್ಲೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿದ್ದಾರೆ. ಅಂತಹವರನ್ನು ಗುರುತಿಸಿ, ಸರ್ಕಾರದ ಸೌಲಭ್ಯ ತಲುಪಿಸಿ, ಮುಖ್ಯ ವಾಹಿನಿಗೆ ತರಬೇಕಿದೆ ಎಂದರು.
ಜನ ಪ್ರತಿನಿಧಿಯಾದವರು ಜನರ ಜೊತೆಗೆ ನಿಕಟ ಸಂಪರ್ಕ ಹೊಂದಿದಲ್ಲಿ ಹಣ, ಹೆಂಡದ ಪ್ರಭಾವಗಳ ಮಧ್ಯೆಯೂ ಜನರಿಂದ ಆಯ್ಕೆಯಾಗಬಹುದು ಎಂಬುದಕ್ಕೆ ಚನ್ನಗಿರಿಯ ವಡ್ನಾಳ ರಾಜಣ್ಣ, ಹರಿಹರದಿಂದ ಚುನಾಯಿತರಾದ ತಾವೇ ಸಾಕ್ಷಿ. ಶುದ್ಧಹಸ್ತ, ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತ ನೀಡಬೇಕೆಂಬುದು ನಮ್ಮ ಅಭಿಲಾಷೆ ಎಂದು ಅವರು ಹೇಳಿದರು.
ಬಸವ ಮಾರ್ಗ: ಸಮಾರಂಭ ಉದ್ಘಾಟಿಸಿದ  ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಬಸವಣ್ಣನಂತಹ ಸಾಧಕರ ಜಯಂತಿಯಂದು ಮಾತ್ರ ಸ್ಮರಿಸಿ, ಹಾಡಿ, ಹೊಗಳಿದರೆ ಸಾಲದು. ಅಣ್ಣ ಹಾಕಿ ಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಸಮಾನತೆ ಸಮಾಜದತ್ತ ನಾವು ಹೆಜ್ಜೆ ಹಾಕಬೇಕು. ಆಗ ಮಾತ್ರ ಇಂತಹ ಆಚರಣೆಗೆ ಅರ್ಥ ಬರುತ್ತದೆ ಎಂದರು.
ವೇದಿಕೆಯಲ್ಲಿ ಆದರ್ಶಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರೇ ಹೆಚ್ಚಾಗಿದ್ದು, ಅಂತಹವರಲ್ಲಿ ನುಡಿದಂತೆ ನಡೆಯುವ ವ್ಯಕ್ತಿಗಳು ವಿರಳ. ನಾವು ಬಸವಣ್ಣನ ಎಲ್ಲಾ ವಚನಗಳನ್ನು ಅರಿಯಲು ಸಾಧ್ಯವಾಗದಿದ್ದರೂ ಕೆಲವನ್ನಾದರೂ ಚೆನ್ನಾಗಿ ಅರಿತು, ನಾವು ಆ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ನಮ್ಮ ನಡೆ, ನುಡಿ ಎರಡೂ ಒಂದೇ ಆಗಬೇಕು. ಜನ ಮೆಚ್ಚುವ ರೀತಿ ನಾವು ಕಾಯಕ ಮಾಡಬೇಕಾಗುತ್ತದೆ. ಚುನಾಯಿತ ಜನ ಪ್ರತಿನಿಧಿಗಳಿಗಿಂತಲೂ ನೌಕರರ ಹೊಣೆಗಾರಿಕೆಯೇ ಹೆಚ್ಚಾಗಿರುತ್ತದೆ ಎಂದು ಅವರು ತಿಳಿಸಿದರು.
ಅಧಿಕಾರಿಗಳು ಸ್ಪಂದಿಸಲಿ: ಜನ ಪ್ರತಿನಿಧಿಯೊಬ್ಬರ ಅವದಿ 5 ವರ್ಷ. ಸ್ವಲ್ಪ ವ್ಯತ್ಯಾಸವಾದರೂ ಎಷ್ಟು ವರ್ಷದವೆಂಬುದಕ್ಕೂ ಖಾತರಿ ಇಲ್ಲ. ಆದರೆ, ಅಧಿಕಾರಿ, ನೌಕರರಾದರೂ 58 ವರ್ಷ ಕಾಲ ಸುಧೀರ್ಘ ಸೇವೆ ಸಲ್ಲಿಸಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿ, ನೌಕರರು ಜನಸಾಮಾನ್ಯರು ಯಾವುದೇ ಕೆಲಸ, ಕಾರ್ಯಕ್ಕೆ ಬಂದಾಗ, ನ್ಯಾಯಯುತವಾಗಿ, ಕಾನೂನಿನಡಿ ತ್ವರಿತವಾಗಿ ಸ್ಪಂದಿಸಿ. ಈ ಮೂಲಕ ಸರ್ಕಾರದ ಕೆಲಸ ದೇವರ ಕೆಲಸ ಎಂಬ ಮಾತನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿ ಎಂದು ವಡ್ನಾಳ್ ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ಕೆ.ಸಿ. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಶಿವಶಂಕರ, ಕಾರ್ಯಾಧ್ಯಕ್ಷ ಶ್ರೀಧರ್, ಖಜಾಂಚಿ ಯು. ರುದ್ರಪ್ಪ, ರವಿಕುಮಾರ, ಚಿತ್ರದುರ್ಗ ಜಗದೀಶ, ಜಯಪ್ಪ, ಕುಸಗಲ್, ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಬಿ.ಕೆ. ರೇಣುಕಾಮೂರ್ತಿ, ವಾರ್ತಾ ಇಲಾಖೆ ಬಿ.ಎಸ್. ಬಸವರಾಜ, ಅಂಗಡಿ ರೇವಣಸಿದ್ದಪ್ಪ, ಬೋಧಕಿ ಸುಮತಿ ಜಯಪ್ಪ ಇತರರು ಇದ್ದರು.
ಇಂಚರ ಆರ್. ಮೂರ್ತಿ ವಚನ ಗಾಯನ ನಡೆಸಿಕೊಟ್ಟರು.
ಸನ್ಮಾನ: ಸರ್ಕಾರಿ ಮಹಿಳಾ ಪದವಿ ಕಾಲೇಜು ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೆಹಾಳ್ ಬಸವಣ್ಣನ ಕುರಿತು ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 630 ಅಂಕದೊಂದಿಗೆ ರಾಜ್ಯಕ್ಕೆ ತೃತೀಯ ರ್ಯಾಂಕ್ ಪಡೆದ ಸೇಂಟ್ ಪಾಲ್ಸ್ ಕಾನ್ವೆಂಟ್ ಸುಪ್ರಿಯಾ, ದ್ವಿತೀಯ ಪಿಯುಸಿಯಲ್ಲಿ 574 ಅಂಕ ಪಡೆದ ನಾಗಶ್ರೀ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement