ಶಾರದಾ ಪೀಠಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಭೇಟಿ
ಶೃಂಗೇರಿ: ಇಲ್ಲಿನ ಶಾರದಾ ಪೀಠಕ್ಕೆ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿ ಎಫ್.ಎ. ಬೋಬ್ಡೆ ಭಾನುವಾರ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ತೋರಣ ಗಣಪತಿ, ಶಂಕರಾಚಾರ್ಯ, ವಿದ್ಯಾಶಂಕರ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು. ನರಸಿಂಹವನದಲ್ಲಿನ ಗುರುನಿವಾಸಕ್ಕೆ ತೆರಳಿ ಜಗದ್ಗುರು ಭಾರತೀ ತೀರ್ಥರನ್ನು ಭೇಟಿ ಮಾಡಿ ಆಶಿರ್ವಾದ ಪಡೆದು ನಂತರ ತೆರಳಿದರು. ಇದೇ ಸಂದರ್ಭದಲ್ಲಿ ರಾಜ್ಯ ಹೈಕೋರ್ಟ್ ನ್ಯಾ. ಬೂದಿಹಾಳ್ ಇದ್ದರು.
ಬಸವ ಕೇಂದ್ರದ ಅಭಿವೃದ್ಧಿಗೆ ಹಣ
ನರಸಿಂಹರಾಜಪುರ: ಮೆಣಸೂರು ಬಸವ ಕೇಂದ್ರದ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭೃದ್ಧಿ ಯೋಜನೆಯಿಂದ ಆರ್ಥಿಕ ಸಹಾಯ ನೀಡಲಾಯಿತು. ಮೆಣಸೂರಿನ ಬಸವ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಬಸವ ಕೇಂದ್ರದ ಸ್ವಾಮೀಜಿ ಬಸವಯೋಗಿ ಪ್ರಭು ಶರಣರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವೀಚಾರಕಿ ಉಮಾವತಿ ಅವರು 30 ಸಾವಿರ ರುಪಾಯಿ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರದ ಸಮಿತಿ ಅಧ್ಯಕ್ಷ ಎನ್.ಎಂ. ಕಾಂತರಾಜ್, ಬಸವ ಕೇಂದ್ರದ ಅಧ್ಯಕ್ಷ ಕಾಂತರಾಜ್ ಇದ್ದರು.
ಪದಾಧಿಕಾರಿಗಳ ಆಯ್ಕೆ
ಚಿಕ್ಕಮಗಳೂರು: ಭಾವಸಾರ ಕ್ಷತ್ರೀಯ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ದೇಶಾದ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಭಾವಸಾರ್ ವಿಷನ್ ಇಂಡಿಯಾ ಸಂಸ್ಥೆ ನಗರಕ್ಕೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಜೂನ್ 2 ರಿಂದ ನೂತನ ಸಂಸ್ಥೆ ನಗರದಲ್ಲಿ ಕಾರ್ಯಾರಂಭ ಮಾಡಲಿದ್ದು ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಹೆಬ್ಬಾರೆ ಜನಾರ್ಧನರಾವ್, ಉಪಾಧ್ಯಕ್ಷರಾಗಿ ಕಲೋಸೆ ಜನಾರ್ಧನ ರಾವ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಹೆಬ್ಬಾರೆ ಸಂತೋಷ್ರಾವ್, ಜಂಟಿ ಕಾರ್ಯದರ್ಶಿಯಾಗಿ ಮಧು ಗುಜ್ಜರ್, ಖಜಾಂಚಿಯಾಗಿ ಪ್ರಕಾಶ್ ಕಾಂಗೋಕ್ಕರ್ ಹಾಗೂ ನಿರ್ದೇಶಕರಾಗಿ 12 ಜನ ಆಯ್ಕೆಯಾಗಿದ್ದಾರೆ. ನಿವೃತ್ತ ಅರಣ್ಯಾಧಿಕಾರಿ ಎಚ್. ಜನಾರ್ಧನರಾವ್ ಅವರ ಅಧ್ಯಕ್ಷತೆಯಲ್ಲಿ ನಗರದಲ್ಲಿ ಭಾನುವಾರ ನಡೆದ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಎಚ್. ಸಂತೋಷ್ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.