ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ಆಗ್ರಹ
ಚಿಕ್ಕಮಗಳೂರು: ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ತರುವಂತೆ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಆಗ್ರಹಿಸಿದೆ.
ಸಿಎಂ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ದಿನದಂದೇ ಗೋವಿನ ಹತ್ಯೆ ಬೆಂಬಲಿಸುವ ರೀತಿಯಲ್ಲಿ ಗೋಹತ್ಯಾ ನಿಷೇಧ ಮಸೂದೆ ಹಿಂತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿರುವುದನ್ನು ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಶಂಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ಆಡಳಿತದ ಆರಂಭದಲ್ಲೇ ಹಿಂದೂ ಭಾವನೆ ಅವಮಾನಿಸುವ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸುವ ಹೇಳಿಕೆ ನೀಡುವ ಮುಖ್ಯಮಂತ್ರಿಗಳು ಹಿಂದುಗಳ ಭಾವನೆ ಕೆದಕಿದ್ದೇ ಆದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಅವರೇ ಜವಾಬ್ದಾರರಾಗಬೇಕು ಎಂದು ಹೇಳಿದರು.
ಜೂನ್ ತಿಂಗಳ ಮೊದಲ ವಾರದಿಂದ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ರಾಮಮಂದಿರ ನಿರ್ಮಾಣ ಸಂಕಲ್ಪಕ್ಕಾಗಿ ರಾಮತಾರಕ ಯಜ್ಞ ಮತ್ತು ಧಾರ್ಮಿಕ ಸಭೆ ನಡೆಯಲಿದ್ದು, ಇದರ ಅಂಗವಾಗಿ ಮೇ 22ಕ್ಕೆ ಬಾಳೆಹೊನ್ನೂರಿನ ರಂಭಾಪುರೀ ಮಠದಲ್ಲಿ ಜಿಲ್ಲಾ ಬೈಠಕ್ ಕರೆಯಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ವಿಭಾಗ ಸಂಚಾಲಕ ಪ್ರವೀಣ್ ಖಾಂಡ್ಯ, ಯೋಗೀಶ್ ರಾಜ್ ಅರಸ್ ಇದ್ದರು.