ಗ್ಯಾರೇಜ್ ಸಂಘದ ಹೆಸರಿನಲ್ಲಿ ವಂಚನೆ: ಆರೋಪ
ಕ.ಪ್ರ.ವಾರ್ತೆ ಮೂಡಿಗೆರೆ ಮೇ 20
ಅಸ್ತಿತ್ವದಲ್ಲಿ ಇರದ ಗ್ಯಾರೇಜ್ ಸಂಘದ ಹೆಸರಿನಲ್ಲಿ ವ್ಯಕ್ತಿಯೋರ್ವ ಹಣ ಸುಲಿಗೆಯಲ್ಲಿ ತೊಡಗಿರುವುದರಿಂದ ಗ್ಯಾರೇಜ್ ಕೆಲಸಗಾರರಿಗೆ ಸಾರ್ವಜನಿಕ ವಲಯದಲ್ಲಿ ಇರಿಸು ಮುರಿಸು ಉಂಟಾಗುವಂತಾಗಿದೆ.
ಆದ್ದರಿಂದ ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸುವಂತೆ ಗಂಗನಮಕ್ಕಿ ಗ್ಯಾರೇಜ್ ಕೆಲಸಗಾರರು ಸೋಮವಾರ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅಶೋಕ್ ಮಾತನಾಡಿ, ಗಂಗನಮಕ್ಕಿಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಂದ ಗ್ಯಾರೇಜ್ ಸಂಘದ ಹೆಸರಿನಲ್ಲಿ ಪ್ರಾನ್ಸೀಸ್ ಎಂಬಾತ 50 ಸಾವಿರ ಹಣ ಪಡೆದು ವಂಚಿಸಿದ್ದಾರೆ. ಇದನ್ನು ಗುತ್ತಿಗೆದಾರರ ಸಹಿತ ಹಣ ಪಡೆದ ವ್ಯಕ್ತಿಯು ಒಪ್ಪಿಕೊಂಡಿದ್ದಾರೆ.
ಗ್ಯಾರೇಜ್ ಕೆಲಸಗಾರನಲ್ಲದ ಆ ವ್ಯಕ್ತಿ ಅಸ್ತಿತ್ವದಲ್ಲಿರದ ಗ್ಯಾರೇಜ್ ಸಂಘದ ಹೆಸರಿನಲ್ಲಿ ಹಣ ಸುಲಿಯುತ್ತಿರುವುದರಿಂದ ನಿಜವಾದ ಗ್ಯಾರೇಜ್ ಕೆಲಸಗಾರರಿಗೆ ಅವಮಾನವಾಗುತ್ತಿದೆ ಎಂದು ಆರೋಪಿಸಿದರು.
ಯಾದ್‌ಗಾರ್ ಇಬ್ರಾಹಿಂ ಮಾತನಾಡಿ, ಆತನಿಂದ ಗಂಗನಮಕ್ಕಿ ಪರಿಸರದಲ್ಲಿ ಇಂಥಹ ಅನೇಕ ಪ್ರಸಂಗಗಳು ನಡೆದಿವೆ. ಕಳೆದ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ತಮ್ಮನ್ನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಹೇಳಿ ಲಾಭ ಗಳಿಸಿದ್ದ. ಭವಿಷ್ಯದಲ್ಲಿ ಮತ್ತೆಂದೂ ಆತ ಇಂಥಹ ನೀಚ ಕೃತ್ಯಕ್ಕೆ ಇಳಿಯದಂತೆ ನಿಗಾ ವಹಿಸಬೇಕಿದೆ ಎಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪರ್ವತೇಗೌಡ, ಶೇಖರ್, ಶಂಕರ್, ಧರ್ಮವೀರ್, ಶಂಕರ್, ಮೋಹನ್, ಶೇರಪ್ಪ, ಜಗದೀಶ್, ಉನ್ನೀಕೃಷ್ಣನ್, ಕಿರಣ್, ಸೇರಿದಂತೆ ಗ್ಯಾರೇಜ್ ಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.