ಬತ್ತಿದ ಅಂತರ್ಜಲ: ನೀರಿಗೆ ತತ್ವಾರ
ಕಡೂರು ಕೃಷ್ಣಮೂರ್ತಿ
ಕ.ಪ್ರ.ವಾರ್ತೆ ಕಡೂರು ಮೇ 20
ಕಡೂರು ಕಳೆದ ಆರೇಳು ವರ್ಷದಿಂದ ಮಳೆ ಬಾರದೆ ಬೆಂಗಾಡಾಗಿರುವ ಕಡೂರು ತಾಲೂಕಿನಲ್ಲಿರುವ ಸುಮಾರು 374 ಹಳ್ಳಿಗಳಲ್ಲಿನ ಕೊಳವೆ ಬಾವಿಗಳು ಮತ್ತು ಕಿರುನೀರು ಸರಬರಾಜು ಘಟಕಗಳಲ್ಲಿ ಅಂತರ್ಜಲ ಕಡಿಮೆಯಾಗಿ ನೀರಿಗೆ ತತ್ವಾರ ಎದುರಿಸುವಂತಾಗಿದೆ.
ಸುಮಾರು 22 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಉಲ್ಬಣವಾಗಿ ಗಂಭೀರ ಸ್ಥಿತಿ ತಲುಪಿದ್ದು, ಅಂತಹ ಗ್ರಾಮಗಳಿಗೆ ಸದ್ಯಕ್ಕೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದರೆ ಇನ್ನೂ ಗಂಭೀರ ಸ್ಥಿತಿಯಿರುವ ಗ್ರಾಮಗಳಿಗೆ ಇಲಾಖೆಯಿಂದಲೇ ಟ್ಯಾಂಕರ್ ಮೂಲಕವೇ ನೀರು ಸರಬರಾಜು ಮಾಡಲು ಕ್ರಮ ಕೊಗೊಳ್ಳಲಾಗುತ್ತಿದೆ.
989 ಕೈಪಂಪು: ಕಡೂರು ತಾಲೂಕಿನಲ್ಲಿ ಒಟ್ಟು 989 ಕೈ ಪಂಪುಗಳು ಇದ್ದು, 298 ಕಿರು ನೀರು ಸರಬರಾಜು ಘಟಕಗಳಿವೆ. ಇವುಗಳಲ್ಲಿ 586 ಕೈಪಂಪುಗಳು ಅಂತರ್ಜಲವಿಲ್ಲದೆ ಮತ್ತು ತಾಂತ್ರಿಕ ಕಾರಣಗಳಿಂದಾಗಿ ನಿಷ್ಕ್ರಿಯಗೊಂಡಿದ್ದರೆ, 134 ಕಿರುನೀರು ಸರಬರಾಜು ಘಟಕಗಳು ಕೂಡ ನಿಷ್ಕ್ರಿಯಗೊಂಡಿವೆ.
ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ಪಟ್ಟಣಗೆರೆ ಪಂಚಾಯ್ತಿಯ ಬಂಡಿಕೊಪ್ಪಲು, ಬಿಳುವಾಲ ಗ್ರಾಮ, ತಂಗಲಿಯ ತಾಂಡ್ಯ, ಜೋಡಿ ತಿಮ್ಮಾಪುರ, ಇಂಗ್ಲಾರನಹಳ್ಳಿ, ಸಖರಾಯಪಟ್ಟಣದ ಬಣಜಾರ್ ತಾಂಡ್ಯ, ಗುಡ್ಡದಹಟ್ಟಿ, ಎಚ್. ರಾಂಪುರ, ವಕ್ಕಲಗೆರೆಯ ಜಿ. ಯರದಕೆರೆ, ಗರ್ಜೆ, ಸಿಂಗಟಗೆರೆ, ಸಿಂಗಟೆಗೆರೆಯ ಮತ್ತೀಹಳ್ಳಿ, ಕಲ್ಲೇನಿಂಗನಹಳ್ಳಿ, ವಿ. ಯರದಕೆರೆಯ ಚಟ್ಟನಹಳ್ಳಿ, ರಾಮನಹಳ್ಳಿ, ಕೆ. ಬಿದರೆಯ ಮಂಜೀಹಳ್ಳಿ, ಮಲ್ಲಪ್ಪನಹಳ್ಳಿ, ಎಸ್. ಮಾದಾಪುರದ ಕುಂದೂರು, ಕೆರೆ ಸಂತೆಯ ನಂಜಪ್ಪನಹಳ್ಳಿ, ಬಾಪೂಜಿ ಕಾಲೋನಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ.
ಟ್ಯಾಂಕರ್ ಮೂಲಕ ನೀರು: ನೀರಿನ ಸಮಸ್ಯೆ ಬಿಗಡಾಯಿಸಿರುವುರಿಂದ ಜಿಪಂ ಎಂಜಿನಿಯರಿಂಗ್ ಇಲಾಖೆಯು ಆಯಾ ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರಿನ ತೀವ್ರತೆ ಎದುರಿಸುತ್ತಿರುವ ಗ್ರಾಮಗಳಿಗೂ ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಪಂ ಎಂಜಿಯನಿಯರಿಂಗ್ ವಿಭಾಗದ ಎಇಇ ಬಿ.ಜೆ. ಪ್ರಭಾಕರ ರಾವ್ ತಿಳಿಸಿದ್ದಾರೆ.
2012-13 ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಂದ 295 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಅದರಲ್ಲಿ 215 ಕೊಳವೆಬಾವಿಗಳು ನೀರು ಸಿಕ್ಕಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಹೊಸದಾಗಿ ಕೊರೆಸಿದ್ದ 16 ಕೊಳವೆ ಬಾವಿಗಳು ವಿಫಲವಾಗಿವೆ.
ಆದ್ಯತೆ ಮೂಲಕ ಅನುದಾನ: ಈ ಬಗ್ಗೆ ಮಾಹಿತಿ ನೀಡಿದ ಪ್ರಭಾಕರ ರಾವ್, ಡಿಸಿ, ಸರ್ಕಾರ ಬರ ಪರಿಹಾರ ಸಮಿತಿ ಸೇರಿದಂತೆ ವಿವಿಧ ಯೋಜನೆಗಳಿಂದ ಗ್ರಾಮಾಂತರ ಪ್ರದೇಶದ ಜನರಿಗೆ ಕುಡಿಯುವ ನೀರು ತೊಂದರೆಯಾಗದಂತೆ ಆದ್ಯತೆ ಮೂಲಕ ಅನುದಾನ ಬಿಡುಗಡೆ ಮಾಡಿದೆ. ಸಾಧ್ಯವಾದಷ್ಟು ಹಳ್ಳಿಗಾಡಿನಲ್ಲಿ ಪ್ರಮುಖವಾಗಿರುವ ನೀರಿನ ಸಮಸ್ಯೆ ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಉಳಿದಂತೆ ದಿನದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ತ್ರೀಫೇಸ್ ವಿದ್ಯುತ್ ಸಂಪರ್ಕ ಕೊಡಿಸುವ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಒಟ್ಟಾರೆ ಟಾಸ್ಕ್ ಫೋರ್ಸ್ ಸೇರಿದಂತೆ ಕುಡಿಯುವ ನೀರಿಗೆ ದಕ್ಕೆ ಬಾರದಂತೆ ಸರ್ಕಾರದಿಂದ ಇದುವರೆಗೂ ಬಿಡುಗಡೆಯಾಗಿದ್ದ 1.96 ಲಕ್ಷ ಅನುದಾನದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಿ ನೀರು ನೀಡಲಾಗುತ್ತಿದ್ದರೆ, ಮತ್ತೆ ಕೆಲವೆಡೆ ಪೈಪುಗಳ ಮೂಲಕ ನೀರು ಸರಬರಾಜು ಮಾಡಲು ಮತ್ತು ಕೈ ಪಂಪುಗಳು ಮತ್ತು ಮೋಟಾರುಗಳನ್ನು ಅಳವಡಿಸಿ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.