ರೈತರ ಸಮಸ್ಯೆಗೆ ಶೀಘ್ರವೇ ಪರಿಹಾರ: ದತ್ತ
ಕ.ಪ್ರ.ವಾರ್ತೆ ಟಿ ಕಡೂರು ಟಿ ಮೇ 20
ಸಾರಿಗೆ ಸಿಬ್ಬಂದಿಗೆ ವಸತಿ ನಿರ್ಮಾಣದಿಂದ ರೈತರ ಜಮೀನಿಗೆ ತೆರಳಲು ತೊಂದರೆ ಆಗುತ್ತಿದ್ದು, ಇದನ್ನು ಸರಿಪಡಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರಿಗೆ ಸಚಿವರೊಂದಿಗೆ ಮಾತುಕತೆ ನಡೆಸಿ ರೈತರ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಪಟ್ಟಣದ ದೊಡ್ಪ ಪಟ್ಟಣಗೆರೆ ರಸ್ತೆಯ ಬಸ್ ಡಿಪೋ ಪಕ್ಕದಲ್ಲಿ ಸಾರಿಗೆ ಸಂಸ್ಥೆಯ ನೌಕರರ ವಸತಿ ಗೃಹಗಳ ನಿರ್ಮಾಣ ಮಾಡುತ್ತಿರುವ ಹಿನ್ನೆಲೆಯಲ್ಲಿ ರೈತರು ಜಮೀನಿಗೆ ಹೋಗಲು ತೊಂದರೆ ಉಂಟಾಗುತ್ತಿದೆ. ಅಲ್ಲದೆ ಬಸ್ ಡಿಪೋ ಜಾಗ ಸೇರಿದಂತೆ ರೈತರು ಓಡಾಡುವ ದಾರಿಯನ್ನು ಸೇರಿಸಿ ಒಟ್ಟು 10.25 ಎಕರೆ ಪ್ರದೇಶವನ್ನು ಸ್ವಾಧೀನ ಪಡಿಸಿಕೊಂಡಿರುವುದರಿಂದ ತೊಂದರೆಯಾಗುತ್ತಿದೆ ಎಂದು ಶಾಸಕ ದತ್ತರವರ ಬಳಿ ರೈತರು ದೂರು ಹೇಳಿದರು.
ರೈತರ ಅಹವಾಲು ಕೇಳಿದ ನಂತರ ತಾಲೂಕು ದಂಡಾಧಿಕಾರಿ ಮತ್ತು ಸರ್ವೇಕ್ಷಣಾ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಚರ್ಚಿಸಿದಾಗ ರೈತರ ಜಮೀನಿನ ದಾರಿಯ ಸ್ವಾಧೀನ ಪ್ರಕ್ರಿಯೆ ನಡೆಯದಂತೆ ಗೆಜೆಟ್ನಲ್ಲಿ ತಿದ್ದುಪಡಿ ಆಗಬೇಕಿತ್ತು ಆದರೆ ಇಲ್ಲಿ ತಪ್ಪಾಗಿದೆ ಎಂದರು.
ನಂತರ ಮಾತನಾಡಿದ ದತ್ತ, ಈ ಕುರಿತು ರೈತರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದಾಗಿ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಈ ಕಾಮಗಾರಿ ಸ್ಥಗಿತಗೊಳಿಸುವಂತೆ ವಿಭಾಗೀಯ ನಿಯಂತ್ರಕರಿಗೆ ಸೂಚಿಸಿದರು.
ನಂತರ ಸಾರಿಗೆ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಾಮಗಾರಿ ಸ್ಥಗಿತಕ್ಕೆ ಆದೇಶ ನೀಡಿದರು. ಸ್ಥಳದಲ್ಲಿ ತಹಸೀಲ್ದಾರ್ ಶಾರದಾಂಬ, ಸರ್ವೇ ಇಲಾಖೆ ಅಧಿಕಾರಿಗಳು ಇದ್ದರು. ಕಾಮಗಾರಿ ಸ್ಥಗಿತದಿಂದ ಸಂತಸದಿಂದ ತೆರಳಿದರು.