25ರಂದು ಸಹಕಾರಿ ಸುವರ್ಣ ಸೌಧ ಉದ್ಘಾಟನೆ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಮೇ 21
ಕಳಸದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಾಣ ಮಾಡಿರುವ ಸಹಕಾರಿ ಸುವರ್ಣ ಸೌಧದ ಉದ್ಘಾಟನಾ ಸಮಾರಂಭ ಮೇ 25 ರಂದು ನಡೆಯಲಿದೆ.
ಮಾಜಿ ಸಚಿವ, ಶಾಸಕ ಎಚ್.ಡಿ. ರೇವಣ್ಣ ಅವರು ನೂತನ ಸಹಕಾರಿ ಸುವರ್ಣ ಸೌಧವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಜಿ.ಕೆ. ಮಂಜಪ್ಪಯ್ಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಅವರು ನೂತನ ಬ್ಯಾಂಕಿನ ಕಟ್ಟಡ ಉದ್ಘಾಟಿಸಲಿದ್ದಾರೆ. ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಗೋದಾಮು ಉದ್ಘಾಟಿಸಲಿದ್ದಾರೆ. ಶಾಸಕ ಬಿ.ಬಿ. ನಿಂಗಯ್ಯ ಅವರು ಬ್ಯಾಂಕಿನ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯೆ ಮೋಟಮ್ಮ ಅವರು ಶಾಮಿಯಾನ ಗೋದಾಮು ಉದ್ಘಾಟಿಸಲಿದ್ದಾರೆ ಎಂದರು.
ಈ ಬ್ಯಾಂಕ್ 4392 ಜನ ಸದಸ್ಯರನ್ನು ಹೊಂದಿದ್ದು, 61.48 ಲಕ್ಷ ಷೇರು ಬಂಡವಾಳ ಹೊಂದಿದೆ. 15.09 ಆಪದ್ಧನ, 20.50 ಲಕ್ಷ ಇತರೆ ನಿಧಿ, 17.43 ಲಕ್ಷ ಸವಕಳಿ ನಿಧಿ ಹಾಗೂ 353.54 ಲಕ್ಷ ದುಡಿಯುವ ಬಂಡವಾಳ ಹೊಂದಿದೆ. ಸದಸ್ಯರಿಗೆ ಬೆಳೆಸಾಲ, ವ್ಯಾಪಾರ ಸಾಲ ಸೇರಿದಂತೆ 805.45 ಲಕ್ಷ ವಿವಿಧ ಸಾಲವನ್ನು ನೀಡಲಾಗಿದೆ. ಬ್ಯಾಂಕ್ ಒಟ್ಟು 99 ಕೋಟಿ ದುಡಿಯುವ ಬಂಡವಾಳ ಹೊಂದಿದೆ ಎಂದು ಅವರು ತಿಳಿಸಿದರು.
ಬ್ಯಾಂಕ್ ಇನ್ನು ಮುಂದೆ ಹಾರ್ಡ್‌ವೇರ್ ಮತ್ತು ಗೃಹ ನಿರ್ಮಾಣ ವಸ್ತುಗಳು ಇನ್ನಿತರ ರೈತ ಉಪಯೋಗಿ ವಸ್ತುಗಳನ್ನು ಉತ್ತಮ ಗುಣಮಟ್ಟ ಹಾಗೂ ನಿಗಧಿತ ಬೆಲೆಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಪೂರೈಸಲು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಎಚ್.ಆರ್. ನೇಮಿರಾಜಯ್ಯ ಹಾಗೂ ಸದಸ್ಯ ಸತೀಶ್ಚಂದ್ರ ಇದ್ದರು.