ಐಟಿ ಮುಂಚೂಣಿಗೆ ರಾಜೀವ್ ಕಾರಣ: ಮೂರ್ತಿ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಮೇ 21
ಭಾರತ ದೇಶ ಮಾಹಿತಿ ತಂತ್ರಜ್ಞಾನದಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿರಲು ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಅವರ ದೂರದೃಷ್ಟಿಯೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಅಭಿಪ್ರಾಯಪಟ್ಟರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ 22ನೇ ಪುಣ್ಯ ಸ್ಮರಣೆಯಲ್ಲಿ ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಬೇಕೆಂಬ ಆಶಯದಿಂದ ಅಧಿಕಾರ ವಿಕೇಂದ್ರೀಕರಣ ಮಾಡಿದ್ದರು. ಸಂವಿಧಾನದ 73 ಮತ್ತು 74ನೇ ವಿಧೇಯಕಕ್ಕೆ ತಿದ್ದುಪಡಿ ತರುವುದರ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮಾಡಿ ಪ್ರತಿಯೊಬ್ಬ ಪ್ರಜೆಗೂ ಪ್ರಯೋಜನ ಹಾಗೂ ಅಧಿಕಾರ ಸಿಗುವಂತೆ ಮಾಡಿದ್ದಾರೆ ಎಂದರು.
ದೂರದೃಷ್ಟಿ: ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎನ್. ಮಹೇಶ್ ಮಾತನಾಡಿ, ದೇಶ ತಾಂತ್ರಿಕವಾಗಿ ಇಷ್ಟೊಂದು ಅಭಿವೃದ್ಧಿಯಾಗಬೇಕಾದರೆ ರಾಜೀವ್ ಗಾಂಧಿಯವರ ದೂರದೃಷ್ಟಿ ಯೋಜನೆಗಳೇ ಕಾರಣ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಡಿ.ಎಲ್. ವಿಜಯ್‌ಕುಮಾರ್ ಮಾತನಾಡಿ, ರಾಜೀವ್ ಗಾಂಧಿಯವರ ಮರಣ ಹೊಂದಿದ ದಿವಸವನ್ನು ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಿಸುತ್ತಿದ್ದು, ದೇಶವನ್ನು ಆಂತರಿಕವಾಗಿ ಘಾಸಿಗೊಳಿಸುವಂತಹ ಭಯೋತ್ಪಾದನೆಯನ್ನು ಹತ್ತಿಕ್ಕಲು ನಾವುಗಳು ಪಣತೋಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಉಪಾಧ್ಯಕ್ಷ ಕೆ.ಎಸ್. ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಮಹಾ ಪ್ರಧಾನ ಕಾರ್ಯದರ್ಶಿ ಕೆ. ಮಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಉರಾಳ್, ಮಾಜಿ ನಗರಸಭಾಧ್ಯಕ್ಷ ಮಹಮದ್ ಅಕ್ಬರ್, ನಗರಸಭೆ ಮಾಜಿ ಸದಸ್ಯರಾದ ಚಂದ್ರೇಗೌಡ, ಸಂದೀಪ್, ಮುಖಂಡರಾದ ಬಿ.ಎಸ್. ಮಹಮದ್, ಹಂಪಾಪುರ ಮಂಜೇಗೌಡ, ಶಿವಾನಂದ, ಶಶಿ, ನಿಸಾರ್ ಅಹ್ಮದ್, ಕೃಷ್ಣ, ಪ್ರಕಾಶ್ ರೈ ಹಾಗೂ ನಿಸಾರ್ ಅಹಮದ್ ಉಪಸ್ಥಿತರಿದ್ದರು.