ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಮೂಡಿಗೆರೆ: ಮೂಡಿಗೆರೆ ಕ್ಷೇತ್ರದ ಎರಡು ಗ್ರಾಪಂ ಅಧ್ಯಕ್ಷರ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.
ಮಂಗಳವಾರ ನಡೆದ ತಾಲೂಕಿನ ಬಿದರಹಳ್ಳಿ ಮತ್ತು ಬಿ.ಹೊಸಳ್ಳಿ ಗ್ರಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಬಿದರಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಎಚ್.ಕೆ. ಪ್ರಭಾಕರ್, ಉಪಾಧ್ಯಕ್ಷರಾಗಿ ಸಾವಿತ್ರಿ ಎಂ.ಎನ್. ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿ. ಹೊಸಳ್ಳಿ ಅಧ್ಯಕ್ಷರಾಗಿ ಬಿ.ಕೆ. ಸುಪ್ರೀಯ, ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಆಯ್ಕೆಯಾಗಿದ್ದಾರೆ.
ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ಬಿ.ಎನ್. ಜಯಂತ್ ಮಾತನಾಡಿ, ಗ್ರಾಮದ ಅಭಿವೃದ್ಧಿಯೇ ಬಿಜೆಪಿಯ ಮೂಲಮಂತ್ರವಾಗಿದೆ. ಅಭಿವೃದ್ಧಿಯತ್ತ ಹೆಚ್ಚಿನ ಆದ್ಯತೆ ನೀಡುವಂತೆ ಪಂಚಾಯಿತಿಯಲ್ಲಿ ಕೆಲಸ ಕಾರ್ಯಕ್ಕೆ ಯಾರೇ ಬಂದರೂ ಪಕ್ಷಭೇದ ಮರೆತು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಯಾವುದೇ ಟೀಕೆಗಳು ಬಂದರೂ ಅದರತ್ತ ಗಮನಹರಿಸದೆ ಕೆಲಸ ಮಾಡುವಂತೆ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.
ಬಿದರಹಳ್ಳಿ ಗ್ರಾಪಂ ಸದಸ್ಯರಾದ ವಿದ್ಯಾಪ್ರದೀಪ್, ಮನೋಜ್, ಎನ್.ಕೆ. ಗೀತಾ, ಸರೋಜ, ವಿದ್ಯಾಚರಣ್, ರಂಗನಾಥ್, ಪ್ರಭಾಮಹೇಶ್, ನಗೀನ ಅಕ್ತರ್, ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಎಸ್. ಸುರೇಂದ್ರ, ಮುಖಂಡರಾದ ಎಂ.ಕೆ. ಪ್ರಾಣೇಶ್, ಮುಗ್ರಹಳ್ಳಿ ಪ್ರಸನ್ನ, ದಿನೇಶ್, ರಾಜೇಶ್, ವಿಎಸ್ಎಸ್ಎನ್ ಅಧ್ಯಕ್ಷ ಧರಣೇಂದ್ರ, ಒಕ್ಕಲಿಗ ಸಂಘದ ನಿರ್ದೇಶಕ ಎಂ.ಎಸ್. ಪ್ರದೀಪ್, ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಜಗದೀಶ್ ಶೆಟ್ಟಿ, ಸಿಬ್ಬಂದಿ ಬಿ.ಎಂ. ಪ್ರವೀಣ್ ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.