ಮನೆಗೆ ನುಗ್ಗಿದ ಮಳೆ ನೀರು
ಕೊಪ್ಪ: ಪಟ್ಟಣದಲ್ಲಿ ಸೋಮವಾರ ತಡರಾತ್ರಿ 3ಗಂಟೆಗೂ ಹೆಚ್ಚು ಕಾಲ ಸುರಿದ ವಿಪರೀತ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ನಿದ್ದೆಯಲ್ಲಿದ್ದವರಿಗೆ ತೀವ್ರ ತೊಂದರೆ ಉಂಟಾಗಿತ್ತು.
ಮಳೆರಾಯ ಗುಡುಗು ಮಿಂಚುಗಳೊಂದಿಗೆ ಈ ವರ್ಷದಲ್ಲಿ ಪ್ರಥಮ ಬಾರಿಗೆ ಅಬ್ಬರಿಸಿದ್ದರಿಂದ ಎಲ್ಐಸಿ ಕಚೇರಿಯ ಮುಂಭಾಗದಲ್ಲಿ ಪಪಂನಿಂದ ನೂತವಾಗಿ ನಿರ್ಮಿಸಿರುವ ಕ್ರೀಡಾಂಗಣದಲ್ಲಿ ಶೇಖರಣೆಯಾದ ಮಳೆ ನೀರು ಇದರ ಕೆಳ ಭಾಗದಲ್ಲಿರುವ ಮನೆಗಳಿಗೂ ನುಗ್ಗಿದ್ದರಿಂದ ವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು. ಪಟ್ಟಣದ ಟಿ.ಎಂ. ರಸ್ತೆಯ ಚರಂಡಿ ಬ್ಲಾಕ್ ಅದ್ದರಿಂದ ಮುಚ್ಚಿದ್ದ ಅಂಗಳಿಗೆ ನೀರು ನುಗ್ಗಿತ್ತು. ದ್ಯಾವೇಗೌಡ ವೃತ್ತದಿಂದ ಮಿನಿ ವಿಧಾನ ಸೌಧದ ವರೆಗೆ ರಸ್ತೆಯ ಅಭಿವೃದ್ಧಿಕಾಮಗಾರಿ ನಡೆದಿದ್ದರು ರಸ್ತೆಯ ಇಕ್ಕೆಲದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯನ್ನು ಮಾಡದೇ ಇದ್ದರಿಂದ ರಸ್ತೆಯ ಇಕ್ಕೆಲದಲ್ಲಿರುವ ಮನೆ, ಅಂಗಡಿ ಮುಗ್ಗಟ್ಟುಗಳಿಗೆ ನೀರು ನುಗ್ಗಿದ್ದರಿಂದ ಬೆಳಿಗ್ಗೆ ಇದನ್ನು ಸ್ವಚ್ಛಗೊಳಿಸಲು ನಿವಾಸಿಗಳು ಹರಸಾಹ ಪಡಬೇಕಾದ ಪರಿಸ್ಥಿತಿ ಎದುರಾಗಿತ್ತು.