ಹನುಮನಗುಂಡಿ ವೀಕ್ಷಣೆ ನಿರ್ಬಂಧಿಸಿ
ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಹನುಮನಗುಂಡಿ ಜಲಪಾತ ವೀಕ್ಷಣೆ ಶಾಶ್ವತ ರದ್ದುಗೊಳಿಸಬೇಕು ಎಂದು ಪರಿಸರಾಸಕ್ತ ಜಿ. ವೀರೇಶ್ ಆಗ್ರಹಿಸಿದ್ದಾರೆ.
ಕುದುರೆಮುಖ ರಾಷ್ಟೀಯ ಉದ್ಯಾನವನದ ಕೆರೆಕಟ್ಟೆ ವಲಯದಲ್ಲಿ ಹನುಮನಗುಂಡಿ ಜಲಪಾತ ಮಳೆ ಕಾಡುಗಳ ಮಧ್ಯೆ ಧುಮ್ಮಿಕ್ಕುತ್ತಿದ್ದು, ಉದ್ಯಾನವನದ ಹೃದಯ ಭಾಗದಲ್ಲಿರುವ ಜಲಪಾತ ಮತ್ತು ಸುತ್ತಲಿನ ಅರಣ್ಯ ಸಂಕೀರ್ಣತೆ ವಿಶಿಷ್ಟತೆಯಿಂದ ಕೂಡಿದೆ.
ಇತ್ತೀಚಿಗೆ ಜಲಪಾತ ವೀಕ್ಷಣೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲಿನ ಅರಣ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕುದುರೆಮುಖ ಅರಣ್ಯಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳೆನಿಸಿವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಸೀದಿ ದುರುಪಯೋಗ: ಜಲಪಾತದ ವೀಕ್ಷಣೆಗೆ ವನ್ಯಜೀವಿ ಅಧಿಕಾರಿಗಳೇ ಅಲ್ಲಿ ಕಾಂಕ್ರಿಟ್ ಕಟ್ಟಡವೊಂದನ್ನು ತೆರೆದು ಬರುವ ಪ್ರವಾಸಿಗರಿಂದ 20 ಪಡೆದು ಪ್ರವೇಶ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಪ್ರವಾಸೋದ್ಯಮ ಬೆಳೆಸಲು ವನ್ಯಜೀವಿ ಅಧಿಕಾರಿಗಳೇ ಇಲ್ಲಿ ಕಾಂಕ್ರಿಟ್ ಕಟ್ಟಡ ತೆರೆದಿರುವುದು ದುರಂತವೇ ಸರಿ.
ಬರುವ ಪ್ರವಾಸಿಗರು ಇಲ್ಲಿ ರಸೀದಿ ಪಡೆದು ಜಲಪಾತ ವೀಕ್ಷಿಸಿ ಎಲ್ಲೆಂದರಲ್ಲಿ ಅರಣ್ಯದಲ್ಲಿ ಸಂಚರಿಸುತ್ತಾರೆ. ತನಿಖಾ ಠಾಣೆಗಳಲ್ಲಿ ಆ ರಸೀದಿ ತೋರಿಸಿ ಜಲಪಾತ ವೀಕ್ಷಣೆಗೆ ಬಂದಿರುವುದಾಗಿ ಹೇಳಿ ಅನೇಕ ಅಪರಾಧಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದಾರೆ ಎಂದು ಆಗ್ರಹಿಸಿದ್ದಾರೆ.