ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನರಸಿಂಹರಾಜಪುರ ಈಗ ಕಸ ಮುಕ್ತ ಪಟ್ಟಣ

Rashmi Kasaragodu
Updated On : 23 May 2013, 11:14 am

ಯಡಗೆರೆ ಮಂಜುನಾಥ್
ಕ.ಪ್ರ.ವಾರ್ತೆ, ಎನ್‌ಆರ್‌ಪುರ, ಮೇ 22
ಪಪಂ ಕಸವನ್ನು ರಸವಾಗಿಸುವ ಮೂಲಕ ನಾಗರಿಕರ ಮೆಚ್ಚುಗೆ ಗಳಿಸಿದೆ.
ಪಟ್ಟಣದ ಅಂದ ಹೆಚ್ಚಿಸಲು ಶುಚಿತ್ವವೇ ಪ್ರಮುಖ. ನಾಗರಿಕರು ಪಪಂ ಅಥವಾ ಪುರಸಭೆಗಳ ಆಡಳಿತ ಹೊತ್ತವರಿಗೆ ಸಹಕಾರ ನೀಡಿ ಸ್ವಚ್ಛತೆಗೆ ಕೈ ಜೋಡಿಸಿದರೆ ಪಟ್ಟಣ ಕಸಮುಕ್ತವಾಗಿ ಕಂಗೊಳಿಸಲು ಸಾಧ್ಯ. ಈ ಸಾಧನೆಯನ್ನು ಇಲ್ಲಿನ ಪಪಂ ನಾಗರಿಕರ ಸಹಕಾರದೊಂದಿಗೆ ಕಸ ಮುಕ್ತ ಪಟ್ಟಣವನ್ನಾಗಿ ಮಾಡಿ ತೋರಿಸಿದೆ.
7,460 ಜನಸಂಖ್ಯೆ: 7,460 ಜನಸಂಖ್ಯೆ ಇರುವ ಪಟ್ಟಣದಲ್ಲಿ 1,650 ಮನೆಗಳಿವೆ. 11 ವಾರ್ಡ್‌ಗಳಿದ್ದು, ಪಟ್ಟಣವನ್ನು ಶುಚಿತ್ವಗೊಳಿಸಲು 14 ಪೌರ ಕಾರ್ಮಿಕರ ತಂಡ ಇದೆ. ಪ್ರತಿ ಮನೆಗೂ ಪಪಂನವರು ಕೆಂಪು ಹಾಗೂ ಹಸಿರು ಬಣ್ಣದ ಬಕೆಟ್ ನೀಡಿದ್ದಾರೆ. ಗಂಟೆ ಬಾರಿಸುತ್ತ ಬರುವ ತಳ್ಳು ಗಾಡಿಗಳಿಗೆ ಮನೆಯವರು ಬಕೆಟ್‌ನಲ್ಲಿ ಸಂಗ್ರಹ ಮಾಡಿರುವ ಕಸವನ್ನು ಹಾಕುತ್ತಾರೆ. ಕೊಳೆಯದ ಕಸ ಹಾಗೂ ಕೊಳೆಯುವ ಕಸ ಎಂದು ವಿಂಗಡನೆ ಮಾಡಲಾಗಿದೆ. ಪಟ್ಟಣದ 11 ವಾರ್ಡುಗಳ ಆಯ್ದ ಜಾಗದಲ್ಲಿ ಕಸ ಒಯ್ಯುವ ಟ್ರಾಕ್ಟರ್ ಬಂದು ನಿಲ್ಲಲಿದ್ದು ಕಸ ತುಂಬಿಕೊಂಡು ಹೋಗಲಿದೆ. 24 ಚದರಡಿಗಿಂತ ಕಡಿಮೆ ಇರುವ ಮನೆಗಳಿಗೆ ತಿಂಗಳಿಗೆ 10 ರುಪಾಯಿ ತೆರಿಗೆ, ಅದಕ್ಕಿಂತ ಮೇಲ್ಪಟ್ಟ ಚದರಡಿ ಇರುವ ಮನೆಗಳಿಗೆ 15 ರುಪಾಯಿ, ವಾಣಿಜ್ಯ ಮಳಿಗೆಗಳಿಗೆ 20 ರುಪಾಯಿಯಂತೆ ತೆರಿಗೆ ವಿಧಿಸಲಾಗುತ್ತದೆ.
2 ಎಕರೆಯಲ್ಲಿ ಕಸ ವಿಲೇವಾರಿ: 2008 ಕ್ಕಿಂತ ಮುಂಚೆ ಪಟ್ಟಣದ ಕಸವನ್ನು ಖಾಲಿ ಇರುವ ಜಾಗದಲ್ಲಿ ಎಸೆಯಲಾಗುತ್ತಿತ್ತು. 2005 ರಲ್ಲಿ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಮೆಣಸೂರು ಗ್ರಾಪಂನ ಹಿಡುವಳ್ಳಿ ಗ್ರಾಮದ ಸ.ನಂ.79 ರಲ್ಲಿ 2 ಎಕರೆ ಪ್ರದೇಶವನ್ನು ಸರ್ಕಾರ ಕಸ ವಿಲೇವಾರಿಗೆ ಮಂಜೂರು ಮಾಡಿತು. 2008 ರಲ್ಲಿ ಸುಸಜ್ಜಿತವಾದ ಕಸ ವಿಲೇವಾರಿ ಕೇಂದ್ರ ಪ್ರಾರಂಭವಾಯಿತು. ಕಸ ವಿಲೇವಾರಿ ಕೇಂದ್ರದ ಸುತ್ತಲೂ ಎತ್ತರವಾದ ಕಾಂಪೌಂಡು ನಿರ್ಮಿಸಲಾಗಿದೆ. 8 ಅಡಿ ಆಳ 20 ಅಡಿ ಉದ್ದದ ಕೆಲವು ಹೊಂಡಗಳನ್ನು ನಿರ್ಮಿಸಲಾಗಿದ್ದು ಅಲ್ಲಿ ಕಸ ಹಾಕಲಾಗುತ್ತದೆ. ಆ ಗುಂಡಿಗಳು ತುಂಬಿದ ಮೇಲೆ ಅದರ ಮೇಲೆ ಮಣ್ಣಿನಿಂದ ಮುಚ್ಚಲಾಗುತ್ತದೆ. 6 ತಿಂಗಳ ನಂತರ ಆ ಕಸ ಗೊಬ್ಬರವಾಗಿ ಪರಿವರ್ತನೆಯಾಗಲಿದ್ದು ಅದನ್ನು ಕಾಂಕ್ರಿಟ್ ಪ್ಲಾಟ್‌ಫಾರಂನಲ್ಲಿ ಶೇಖರಣೆ ಮಾಡಿ ರೈತರಿಗೆ ಮಾರಾಟ ಮಾಡಲಾಗುತ್ತದೆ. ಇನ್ನೊಂದು ಪಾರ್ಶ್ವದಲ್ಲಿ ಸುಸಜ್ಜಿತವಾದ ಎರಡು ಕಾಂಕ್ರಿಟ್ ತೊಟ್ಟಿಗಳನ್ನು ನಿರ್ಮಿಸಲಾಗಿದೆ.
 ಇದರಲ್ಲಿ ಎರೆ ಹುಳ ಗೊಬ್ಬರ ತಯಾರಿಸಲು ಸಿದ್ಧತೆ ನಡೆಸಲಾಗಿದೆ. ಮನುಷ್ಯರ ಮಲವನ್ನು ಹಾಕಲು 20 ಅಡಿ ಆಳವಾದ ವಿಶೇಷ ತಾಂತ್ರಿಕತೆಯಿಂದ ನಿರ್ಮಿಸಲಾದ 5 ಚೇಂಬರ್‌ಗಳನ್ನು ನಿರ್ಮಿಸಲಾಗಿದೆ.ಅದಕ್ಕೆ ಕೆಮಿಕಲ್ಸ್ ಹಾಕುವುದರಿಂದ ಯಾವುದೇ ದುರ್ವಾಸನೆ ಬರದಂತೆ ಎಚ್ಚರಿಕೆ ವಹಿಸಲಾಗಿದೆ. ಸತ್ತ ಪ್ರಾಣಿಗಳನ್ನು ಹಾಕಲು ಪ್ರತ್ಯೇಕ 3 ಗುಂಡಿಗಳನ್ನು ಮಾಡಲಾಗಿದೆ. ಕಸ ವಿಲೇವಾರಿ ಕೇಂದ್ರಕ್ಕೆ ಬೋರ್‌ವೆಲ್ ತೆಗೆಯಲಾಗಿದ್ದು ನೀರಿನ ವ್ಯವಸ್ಥೆ, ವಿದ್ಯುತ್‌ವ್ಯವಸ್ಥೆ ಇದೆ. 24 ಗಂಟೆಗಳ ಕಾಲವೂ ಕಸ ವಿಲೇವಾರಿ ಜಾಗದಲ್ಲಿ ಕಾವಲು ಕಾಯುವ ವಾಚಮನ್ ನೇಮಿಸಲಾಗಿದೆ.
10 ಎಕರೆ ಅಗತ್ಯ: ಕಸ ವಿವೇವಾರಿ ಮಾಡಲು ಭವಿಷ್ಯದಲ್ಲಿ ಕನಿಷ್ಠ 10 ಎಕರೆ ಜಾಗದ ಅಗತ್ಯ ಇದೆ ಎನ್ನುತ್ತಾರೆ ಪಪಂ ಮಾಜಿ ಅಧ್ಯಕ್ಷ ಬಿ.ಎಸ್. ಆಶೀಶ್ ಕುಮಾರ್. ಪಟ್ಟಣ ಬೆಳೆಯುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಪಟ್ಟಣವನ್ನು ಪುರಸಭೆಯನ್ನಾಗಿ ಪರಿವರ್ತಿಸುವ ಶಿಪಾರಸ್ಸು ಮಾಡಲಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮೆಣಸೂರು, ಬಿ.ಎಚ್. ಕೈಮರ, ಇಂದಿರಾ ನಗರ, ಜೈಲ್ ಬಿಲ್ಡಿಂಗ್ ಏರಿಯಾ ಪಟ್ಟಣಕ್ಕೆ ಸೇರ್ಪಡೆಗೊಂಡರೆ ಆಗ ಕಸ ವಿಲೇವಾರಿಗೆ 10 ಎಕರೆ ಜಾಗ ಬೇಕಾಗುತ್ತದೆ. ಈ ಹಿಂದೆ ಪಪಂನಿಂದ 10 ಎಕರೆ ಜಾಗಕ್ಕೆ ಶಿಪಾರಸ್ಸು ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದರು.
ಸುವರ್ಣ ಗೆಡ್ಡೆ: ಮುಂದಿನ ಗುರಿ ಪಪಂ ಸದಸ್ಯರ ಸಹಕಾರದೊಂದಿಗೆ ಕಸ ವಿಲೇವಾರಿ ಕೇಂದ್ರದ 2 ಎಕರೆ ಜಾಗದಲ್ಲಿ ಖಾಲಿ ಉಳಿದಿರುವ ಪ್ರದೇಶದಲ್ಲಿ ಸುವರ್ಣ ಗೆಡ್ಡೆ, ಮೆಕ್ಕೆ ಜೋಳ ಬೆಳೆಯುವ ಚಿಂತನೆ ಮಾಡಲಾಗುತ್ತಿದೆ ಎನ್ನುತ್ತಾರೆ ಪಪಂ ಮುಖ್ಯಾಧಿಕಾರಿ ನಾಗೇಂದ್ರ. ಪಟ್ಟಣವನ್ನು ಕಸ ಮುಕ್ತ ಪಟ್ಟಣವನ್ನಾಗಿ ಮಾಡಲು ಜನರ ಸಹಕಾರ ಬಹಳ ಮುಖ್ಯ. ಕಸವನ್ನು ಕೊಳೆಯುವ ಕಸ ಹಾಗೂ ಕೊಳೆಯದ ಕಸ ಎಂದು ಎರಡು ವಿಭಾಗವನ್ನಾಗಿ ಮಾಡಿದ್ದೇವೆ. 40 ಎಂಎಂ ಗಿಂತ ಕಡಿಮೆ ಗಾತ್ರ ಇರುವ ಕೊಳೆಯದ ಕಸವಾದ ಪ್ಲಾಸ್ಟಿಕ್‌ನ್ನು ಈಗಾಗಲೇ 30 ಚೀಲಗಳಲ್ಲಿ ಇಡಲಾಗಿದ್ದು ಇದನ್ನು ಮಾರಾಟ ಮಾಡಲಾಗುತ್ತದೆ. ಬೇರೆ ರಾಜ್ಯದಲ್ಲಿ ಕಾಂಕ್ರಿಟ್ ರಸ್ತೆಗಳಿಗೆ ಇದನ್ನು ಮಿಶ್ರ ಮಾಡಿ ಬಳಸಲಾಗುತ್ತದೆ. ಸಂತೆಗಳಲ್ಲಿ ಪ್ಲಾಸ್ಚಿಕ್ ಬಳಕೆ ಹೆಚ್ಚಾಗಿರುವುದರಿಂದ ತರಕಾರಿ ಹಾಕಲು ಬಟ್ಟೆ ಕೈ ಚೀಲಗಳನ್ನು ಪಪಂನಿಂದಲೇ ನೀಡುವ ವ್ಯವಸ್ಥೆ ಬಗ್ಗೆ ಚಿಂತಿಸಲಾಗಿದೆ ಎಂದರು.
ಅರಿವು ಅಗತ್ಯ: ಪಟ್ಟಣದ ಸ್ವಚ್ಛತೆ, ಕಸವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರೆ ಪಟ್ಟಣ ಇನ್ನಷ್ಟು ಕಸದಿಂದ ಮುಕ್ತವಾಗುವುದರಲ್ಲಿ ಸಂಶಯವಿಲ್ಲ. ನೂತನವಾಗಿ ಆಯ್ಕೆಯಾದ ಪಪಂ ಸದಸ್ಯರು ತಮ್ಮ 5 ವರ್ಷದ ಅಧಿಕಾರದ ಅವದಿಯಲ್ಲಿ ಕಸ ಮುಕ್ತ ಪಟ್ಟಣವನ್ನಾಗಿ ಮಾಡಲು ಶ್ರಮಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement