ವಿಪತ್ತು ನಿರ್ವಹಣೆ ಕುರಿತ ಪ್ರಾತ್ಯಕ್ಷಿಕೆ
ಕ.ಪ್ರ.ವಾರ್ತೆ ಟಿ ನರಸಿಂಹರಾಜಪುರ ಟಿ ಮೇ 22
ರಾಷ್ಟ್ರೀಯ ವಿಪತ್ತು ಸಂಭವಿಸಿದಾಗ ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ಪಾತ್ಯಕ್ಷಿಕೆ ಮತ್ತು ಮಾಹಿತಿ ಕಾರ್ಯಕ್ರಮವು ಪಟ್ಟಣದ ವಾಟರ್ ಟ್ಯಾಂಕ್ ಸಮೀಪದ ನೂತನ ರಂಗಮಂದಿರದಲ್ಲಿ ಬುಧವಾರ ನಡೆಯಿತು.
ಆಂಧ್ರಪ್ರದೇಶದ ರಾಷ್ಟೀಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ರಾಷ್ಟೀಯ ವಿಪತ್ತು ನಿರ್ವಹಣಾ ತಂಡದ ಮುಖ್ಯಸ್ಥ ಸರ್ವಜ್ಞ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಹಿಂದೆ ಗುಜರಾತ್ನ ಕಚ್ ಎಂಬ ಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು.
2004ರಲ್ಲಿ ಭಾರತದಲ್ಲಿ ಸುನಾಮಿ ಎಂಬ ನಡೆದು ಅಪಾರ ಹಾನಿಯಾಗಿತ್ತು. ಈ ಘಟನೆಯಿಂದ ಎಚ್ಚೆತ್ತ ಕೇಂದ್ರ ಸರ್ಕಾರವು 2004ರಲ್ಲಿ ರಾಷ್ಟೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಪಿ) ವನ್ನು ಅಸ್ತಿತ್ವಕ್ಕೆ ತಂದಿತು ಎಂದು ಹೇಳಿದರು.
15ದಿನಗಳಿಂದ ಪ್ರಾತ್ಯಕ್ಷಿಕೆ: ಮುಖ್ಯವಾಗಿ ಅಪಘಾತ ಸಂಭವಿಸಿದಾಗ ಪ್ರಥಮ ಚಿಕಿತ್ಸೆ, ಬೆಂಕಿ ಅನಾಹುತವಾದಾಗ, ಚಂಡಮಾರುತ ಬೀಸಿದಾಗ, ಪ್ರವಾಹ ಬಂದಾಗ, ಕಟ್ಟಡ ಕುಸಿದಾಗ ಜನರು ಅನುಸರಿಸಬೇಕಾದ ಮುನ್ನೆಚ್ಚರಿಕೆ, ವಿಪತ್ತು ಬಂದ ನಂತರ ತುರ್ತಾಗಿ ಮಾಡಬೇಕಾದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡುತ್ತಿದ್ದೇವೆ.
ಕಳೆದ 15 ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ ಅವರು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಭೆಯಲ್ಲಿ ಎನ್ಡಿಆರ್ಪಿ ಮುಖ್ಯಸ್ಥ ಕೆ.ಪಿ. ಸಿಂಗ್, ತಹಸೀಲ್ದಾರ್ ಕೃಷ್ಣಮೂರ್ತಿ, ವಲಯ ಅರಣ್ಯಾಧಿಕಾರಿ ಕೇಶವಮೂರ್ತಿ, ಹೋಂ ಗಾರ್ಡ್ಸ್ ಮುಖ್ಯಸ್ಥ ವೆಂಕಟೇಶ್ ಮತ್ತಿತರರಿದ್ದರು. ಎನ್ಡಿಆರ್ಪಿ 18 ಜನರ ತಂಡವು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.