ಇಂದು ಅಭಿನಂದನಾ ಸಮಾರಂಭ
ಶೃಂಗೇರಿ: ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಕ್ಷೇತ್ರದಲ್ಲಿ ಸತತ ಮೂರನೇ ಭಾರಿ ಗೆದ್ದು ಹ್ಯಾಟ್ರಿಕ್ ಗೆಲವು ಸಾಧಿಸಿದ ಶಾಸಕ ಡಿ.ಎನ್. ಜೀವರಾಜ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ಮೇ 24ರಂದು ಸಂಜೆ 4 ಗಂಟೆಗೆ ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯಲಿದೆ. ತಾಲೂಕು ಘಟಕದ ಅಧ್ಯಕ್ಷ ಎ.ಎಸ್. ನಯನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ಪ್ರಾಣೇಶ್, ಜಿಪಂ ಮಾಜಿ ಉಪಾಧ್ಯಕ್ಷ ಮಾವಿನಕಾಡು ರಂಗನಾಥ್, ಪಪಂ ಮಾಜಿ ಅಧ್ಯಕ್ಷ ಪರಾಶರ, ಬಿ. ಶಿವಶಂಕರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ಬದನೆಹಾಳ್: ಮತ್ತೆ ಪ್ರತಿಭಟನೆ
ಭದ್ರಾವತಿ: ತಾಲೂಕಿನ ಬದನೆಹಾಳ್ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮತ್ತು ಗ್ರಾಮಸ್ಥರ ನಡುವೆ ಮತ್ತೊಮ್ಮೆ ಸಂಘರ್ಷವೇರ್ಪಟ್ಟಿದೆ. ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವೆ ನಂ.35ರಲ್ಲಿರುವ ಜಮೀನಿನಲ್ಲಿ ಪ್ಲಾಂಟೇಶನ್ ಸಸಿ ನೆಡಲು ಮುಂದಾದಾಗ ಗ್ರಾಮಸ್ಥರು ಅದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಇಲಾಖೆಯವರು ಪೊಲೀಸರಿಗೆ ದೂರು ನೀಡಿದಾಗ ಶಾಸಕ ಎಂ.ಜೆ. ಅಪ್ಪಾಜಿ ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಪ್ರತಿಭಟನೆಗೆ ತಮ್ಮ ಬೆಂಬಲ ಸೂಚಿಸಿ ಗ್ರಾಮಸ್ಥರೊಂದಿಗೆ ತಾವೂ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದಾಗ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಬೇಸ್ತುಬಿದ್ದರು. ತಮ್ಮನ್ನು ಹಾಗೂ ಗ್ರಾಮಸ್ಥರನ್ನು ಎಬ್ಬಿಸಿ ನಂತರ ಸಸಿಗಳನ್ನು ನೆಡಿ ಎಂದು ಅಪ್ಪಾಜಿ ವಾದಿಸಿದರು. ಪ್ರತಿಭಟನಾನಿರತ ಶಾಸಕರು ಮತ್ತು ಗ್ರಾಮಸ್ಥರ ಮೇಲೆ ಇಲಾಖಾ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳಲಾಗದೆ ಅಸಹಾಯಕರಾಗಿ ನಿಲ್ಲಬೇಕಾಯಿತು.
ಗ್ರಾಮಸ್ಥರೊಂದಿಗೆ ಧರಣಿ ಕುಳಿತ ಶಾಸಕ ಎಂ.ಜೆ. ಅಪ್ಪಾಜಿ ಸ್ಥಳಕ್ಕೆ ಡಿಎಫ್ಓ ಬರಬೇಕೆಂದು ಪಟ್ಟುಹಿಡಿದರು. ಸಂಜೆ ನಂತರ ಡಿಎಫ್ಓ ಕೆ.ಎಸ್. ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಅಪ್ಪಾಜಿ ಅವರೊಂದಿಗೆ ಮಾತುಕತೆ ನಡೆಸಿದರೂ ಯಾವುದೇ ಇತ್ಯರ್ಥಕ್ಕೆ ಬರಲಾಗಲಿಲ್ಲವೆಂದು ಮೂಲಗಳು ತಿಳಿಸಿವೆ.
40 ವರ್ಷಗಳಿಂದ ಒಕ್ಕಲು ಮಾಡುತ್ತಿರುವ ರೈತರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಒಮ್ಮೆಲೇ ಒಕ್ಕಲೆಬ್ಬಿಸುವ ಕ್ರಮ ಸರಿಯಲ್ಲ. ಇದರ ಬಗ್ಗೆ ಸದನದಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳಿಂದ ಮಾರ್ಗದರ್ಶನ ತರಿಸುತ್ತೇನೆಂದು ಡಿಎಫ್ಓ ಅವರಿಗೆ ತಿಳಿಸಿದರೂ ಅವರು ಅದಕ್ಕೆ ಇಲಾಖೆ ನಿಯಮಾವಳಿಗನುಸಾರವಾಗಿ ಪ್ಲಾಂಟೇಶನ್ ಮಾಡಲು ತಮಗೆ ಮೇಲಧಿಕಾರಿಗಳಿಂದ ಆದೇಶ ಬಂದಿರುವುದರಿಂದ ತಾವು ಅಸಹಾಯಕರೆಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಗಂಗಾಧರ ಇದ್ದರು.