ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಡೂರನ್ನು ಕಾಡುತ್ತಿದೆ ನೀರಿನ ಸಮಸ್ಯೆ

Rashmi Kasaragodu
Updated On : 24 May 2013, 11:20 am

ಗಂಭೀರ ಸ್ಥಿತಿಗೆ ತಲುಪಿರುವ ನೀರಿನ ಸಮಸ್ಯೆ ೤ ಕೊಡ ನೀರಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ
 ಕಡೂರು ಕೃಷ್ಣಮೂರ್ತಿ
ಕಡೂರು: ನೀರಿನ ನಲ್ಲಿಗಳಿಗೆ ಕಟ್ಟಿರುವ ಬಾಟಲಿ, ಡಬ್ಬಗಳು. ಇದು ಯಾವುದೇ ಹರಕೆಯ ಪರಿ ಅಲ್ಲ. ಕುಡಿಯುವ ನೀರು ಹಿಡಿಯಲು ಸೀನಿಯಾರಿಟಿಗಾಗಿ ಅಡ್ವಾನ್ಸ್ ಬುಕಿಂಗ್ ಮಾಡು ರೀತಿ.
 ಇದು ಕಡೂರಿನಲ್ಲಿ ಗಂಭೀರ ಸ್ಥಿತಿಗೆ ತಲುಪಿರುವ ನೀರಿನ ಸಮಸ್ಯೆಯ ನೈಜ ಚಿತ್ರಣ. ಮಳೆಯಿಲ್ಲದೆ ಪಟ್ಟಣದ ಕೊಳವೆಬಾವಿಗಳಲ್ಲಿ ಅಂತರ್ಜಲ ಕಡಿಮೆಯಾಗಿ ಸುಮಾರು 90ಕ್ಕೂ ಹೆಚ್ಚು ಕೊಳವೆಬಾವಿಗಳು ಮತ್ತು ಕಿರುನೀರು ಸರಬರಾಜು ಘಟಕಗಳಲ್ಲಿ ಅಂತರ್ಜಲ ಕಡಿಮೆಯಾಗಿದೆ.
 23 ವಾರ್ಡುಗಳಲ್ಲಿ ಕನಿಷ್ಠ ಒಂದು ವಾರ್ಡಿನಲ್ಲಿ ಮೂರ್ನಾಲ್ಕು ಕೊಳವೆಬಾವಿ ಮತ್ತು ಒಂದೊಂದು ಕಿರು ನೀರು ಸರಬರಾಜು ಘಟಕಗಳಿವೆ. ಇವುಗಳಲ್ಲಿ ಕೆಲವು ಸಂಪೂರ್ಣ ಬತ್ತಿದ್ದರೆ ಮತ್ತೆ ಕೆಲವಲ್ಲಿ ಬರುವ ನೀರನ್ನೆ ಎರಡು ಮೂರು ವಾರ್ಡುಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಪೈಪ್ ಮೂಲಕ ಸರಬರಾಜು ಸ್ಥಗಿತಗೊಳಿಸಿ ಕೊಳವೆಬಾವಿ ಕೊರೆಸಿರುವ ಸ್ಥಳದಲ್ಲಿಯೇ ನಲ್ಲಿಗಳನ್ನು ಹಾಕುವ ಮೂಲಕ ನೀರೊದಗಿಸಲಾಗುತ್ತಿದೆ.
 ಸ್ಟೇಷನ್ ರಸ್ತೆಯ ಸುಭದ್ರ ಹಾರ್ಡ್ವೇರ್ ಅಂಗಡಿ ಮುಂಭಾಗ ಕೊರೆಸಿರುವ ಕೊಳವೆಬಾವಿಯಿಂದ 12, 13 ಮತ್ತು 14ನೇ ವಾರ್ಡಿನವರೆಗೂ ಪೈಪ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಈ ಕೊಳವೆಬಾವಿಯ ನೀರಿನ ಪ್ರಮಾಣ ಕಡಿಮೆಯಾಗಿ ಪಕ್ಕದ ಮಿನಿ ಟ್ಯಾಂಕಿಗೆ ನೀರು ಒದಗಿಸಲು ಸಾಧ್ಯವಾಗದೆ ಕೊಳವೆ ಘಟಕದ ಮುಂದೆ ನಲ್ಲಿಗಳನ್ನು ಹಾಕಲಾಗಿದೆ.
 ಇಲ್ಲಿ ಆರು ನಲ್ಲಿ ಹಾಕಲಾಗಿದ್ದು, ಪ್ರತಿ ನಲ್ಲಿಗೆ ಮೊದಲು ಯಾರು ಡಬ್ಬ ಅಥವಾ ಪ್ಲಾಸ್ಟಿಕ್ ಬಾಟಲಿ ಕಟ್ಟುತ್ತಾರೋ ಅವರು ಮೊದಲು ನೀರು ಹಿಡಿಯುವ ಸೀನಿಯಾರಿಟಿ ಪಡೆಯುತ್ತಾರೆ. 10 ಕೊಡಪಾನ ನೀರು ಒಬ್ಬರು ಹಿಡಿಯಬಹುದು. ಎರಡನೆಯವರು ಕಟ್ಟಿದಾಗ ಎರಡನೇ ಸೀನಿಯಾರಿಟಿ ಸಿಗುತ್ತದೆ. ಈ ರೀತಿ ಒಂದೊಂದು ನಲ್ಲಿಗೆ ಕನಿಷ್ಠ ಮೂವರು ಐವರು ಸೇರಿದಂತೆ ಡಬ್ಬಗಳನ್ನು ಕಟ್ಟಿ ತಮ್ಮ ಪಾಲಿನ ನೀರನ್ನು ಕಾಯ್ದಿರಿಸಿಕೊಳ್ಳುತ್ತಿರುವುದು ಕಡೂರಿನ ನೀರಿನ ಸಮಸ್ಯೆಯನ್ನು ಎತ್ತಿ ತೋರಿಸುತ್ತಿದೆ.
 ಇನ್ನು ಈ ಘಟಕದ ಉಸ್ತುವಾರಿ ನೋಡುವ ವಾಟರ್ ಮೆನ್ ಬೆಳಿಗ್ಗೆ 5 ಗಂಟೆಗೆ ಬಂದು ಸ್ವಿಚ್ ಆನ್ ಮಾಡುತ್ತಿದ್ದಂತೆ ಸೀನಿಯಾರಿಟಿಯಂತೆ ಜನರು ಕೊಡಪಾನಗಳಿಂದ ನೀರು ಹಿಡಿಯುತ್ತಾರೆ. 10 ಗಂಟೆಗೆ ಬಂದು ವಾಟರ್ ಮೆನ್ ಘಟಕದ ಸ್ವಿಚ್ ಆಫ್ ಮಾಡಿದ ಕೂಡಲೇ ನೀರಿನ ಸರಬರಾಜು ನಿಲ್ಲುತ್ತದೆ. ಮತ್ತೆ ನಲ್ಲಿಗಳಿಗೆ ಎಂದಿನಂತೆ ಡಬ್ಬಗಳು ಮತ್ತು ಪ್ಲಾಸ್ಟಿಕ್ ಬಾಟಲಿಗಳು ನೇತು ಹಾಕಿಕೊಳ್ಳುತ್ತವೆ.
 ಟ್ಯಾಂಕುಗಳ ನೀರಿನ ಪೂರೈಕೆ ಕಡಿಮೆಯಾಗಿ ಅಷ್ಟಾಗಿ ನೀರು ಸರಬರಾಜು ಮಾಡಲಾಗುತ್ತಿಲ್ಲ. ಹಿಂದೆ ವೇದಾನದಿಯಿಂದ ಪಟ್ಟಣದ 5 ವಾಟರ್ಟ್ಯಾಂಕುಗಳಿಗೆ ಪೈಪು ಮೂಲಕ ನೀರು ಪೂರೈಕೆ ಮಾಡಿ ನಲ್ಲಿಗಳಿಂದ ನೀರು ಸರಬರಾಜು ಮಾಡಲಾಗುತಿತ್ತು. ಆದರೆ ವೇದಾನದಿ ಮಳೆಯಿಲ್ಲದೆ ಒಣಗಿ ಏಳೆಂಟು ವರ್ಷಗಳೇ ಕಳೆದಿರುವುದರಿಂದ ಬೋರ್ವೆಲ್ಗಳೇ ನೀರಿನ ಮೂಲವಾಗಿವೆ. ಆದರೆ ವೇದಾನದಿ ಪಂಪ್ ಹೌಸ್ ಬಳಿ 13 ಕೊಳವೆ ಬಾವಿ ಕೊರೆಸಿದ್ದು ಇದೀಗ ಅವುಗಳಲ್ಲಿ ಕೇವಲ ಮೂರ್ನಾಲ್ಕರಲ್ಲಿ ಮಾತ್ರ ನೀರು ಸಿಗುತ್ತಿದ್ದು, ಟ್ಯಾಂಕರ್ಗಳ ಮೂಲಕ ವಾರ್ಡುಗಳಿಗೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
 ಹಲವು ವಾರ್ಡುಗಳಲ್ಲಿ ಐದರಿಂದ ಹತ್ತು ದಿನಕ್ಕೊಮ್ಮೆ ನೀರು ಬಿಡುತ್ತಿರುವ ಸ್ಥಿತಿ ನೋಡಬಹುದು. ನೀರು ಬಿಡುತ್ತಾರೆ ಎಂಬ ವಿಷಯ ತಿಳಿದ ಕೂಡಲೇ ಮಹಿಳೆಯರು ಮನೆ ಕೆಲಸ ಬಿಟ್ಟು ಬಿಸಿಲಿನಲ್ಲಿ ಕಾದು ಕುಳಿತು ಸರತಿಯಲ್ಲಿ ಕೊಡಪಾನಗಳನ್ನು ಇಟ್ಟು ನಲ್ಲಿಯಲ್ಲಿ ನೀರು ಬರುವುದನ್ನೇ ಕಾಯುವ ಚಿತ್ರಣ ಸಾಮಾನ್ಯವಾಗಿದೆ. ಕಳೆದ ಎರಡು ಮೂರು ದಿನಗಳ ಹಿಂದೆ ಉತ್ತಮ ಮಳೆಯಾಗಿದ್ದು ಬಿಟ್ಟರೆ ಮತ್ತೆ ಮಳೆ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement