'ಗುಡಿ ಕೈಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ'
ಕ.ಪ್ರ.ವಾರ್ತೆ ಟಿ ನ.ರಾ.ಪುರ ಟಿ ಮೇ 23
ಬೃಹತ್ ಕೈಗಾರಿಕೆಗಳ ಪೈಪೋಟಿ ನಡುವೆಯೂ ಗುಡಿ ಕೈಗಾರಿಕೆ ಮೂಲಕ ಕೈಮಗ್ಗ ನೇಕಾರ ವೃತ್ತಿಯನ್ನು ಪ್ರಾರಂಭಿಸಿ ಯಶಸ್ವಿಯಾಗಿ ತಮ್ಮ ಬದುಕನ್ನು ಕಟ್ಟಿಕೊಂಡ ಕೃಷ್ಣದಾಸ್ ನಿರುದ್ಯೋಗಿಗಳಿಗೆ ಮಾದರಿಯಾಗಿ ನಿಲ್ಲುತ್ತಾರೆ.
ಕೇರಳ ಮೂಲದಿಂದ ಬಂದ ಕೃಷ್ಣದಾಸ್ 1996 ರಲ್ಲಿ ಪ್ರಧಾನಮಂತ್ರಿ ರೋಜಗಾರ್ ಯೋಜನೆಯಡಿ ಬ್ಯಾಂಕಿನಿಂದ ಸಾಲ ಪಡೆದು ವಿಶ್ವ ಕಾರ್ಯಕ್ರಮದಡಿ ನರಸಿಂಹರಾಜಪುರ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಮೆಣಸೂರು ಗ್ರಾಮ ಪಂಚಾಯ್ತಿ ಹಿಂಭಾಗದಲ್ಲಿ ನಿರ್ಮಿಸಿರುವ ವಿಶ್ವ ಕಟ್ಟಡದಲ್ಲಿ ಕೈಮಗ್ಗ ಪ್ರಾರಂಭಿಸಿದರು. ಈ ಹಿಂದೆ ನೇಕಾರ ವೃತ್ತಿಯಲ್ಲಿ ಪ್ರಾವಿಣ್ಯತೆ ಪಡೆದಿದ್ದ ಕೃಷ್ಣದಾಸ್ ಹೆಚ್ಚಿನ ತರಬೇತಿಗಾಗಿ ಬೆಳಗಾಂಗೆ ತೆರಳಿ ಅಲ್ಲಿನ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು. ಕೆಲವು ವರ್ಷಗಳ ನಂತರ ಮತ್ತೆ ಹೆಚ್ಚುವರಿ ಬಂಡವಾಳ ಹಾಕಿ ವಿದ್ಯುತ್ ಚಾಲಿತ ನೇಕಾರಿಕೆ ಪ್ರಾರಂಭಿಸಿದರು.
ಟವಲ್ ತಯಾರಿಕೆ: ಮಲೆನಾಡು ಭಾಗದಲ್ಲೇ ಅಪರೂಪ ಎನಿಸಿದ್ದ ನೇಕಾರಿಕೆಯಿಂದ ಕೃಷ್ಣದಾಸ್ ಪ್ರಸ್ತುತ ಬಿಳಿ,ಕೆಂಪು ಬಣ್ಣದ ಟವಲ್, ಪಾಣಿ ಪಂಚೆ ತಯಾಸಿಸುತ್ತಿದ್ದಾರೆ. ದಾವಣಗೆರೆ, ರಾಣಿಬೆನ್ನೂರು ಪಟ್ಟಣದಿಂದ ಕೈಮಗ್ಗಕ್ಕೆ ಬೇಕಾದ ದಾರ, ಬಣ್ಣ ಹಾಗೂ ಇತರೆ ಕಚ್ಚಾ ವಸ್ತುಗಳನ್ನು ಖರೀದಿಸಿ ತರುತ್ತಾರೆ.ನೂಲಿಗೆ ಬಣ್ಣ ಹಾಕುವ ಕಲೆಯೂ ಇವರಿಗೆ ಕರಗತವಾಗಿದೆ.
ಇವರ ಪತ್ನಿ ಇಂದುಕುಮಾರಿ ಸಹ ಪತಿಯ ವೃತ್ತಿಗೆ ಸಹಕಾರ ನೀಡುತ್ತಾರೆ. ಇವರು ತಯಾರಿಸುವ ಟವಲ್ 40 ರಿಂದ 45 ರುಪಾಯಿಗೆ ಮಾರಾಟ ಮಾಡುತ್ತಾರೆ. ಸ್ಥಳೀಯವಾಗಿ ಹಾಗೂ ಇತರೆ ಪಟ್ಟಣಗಳಿಗೂ ಸಹ ಬೇಡಿಕೆ ಅನುಸರಿಸಿ ಮಾರಾಟ ಮಾಡುತ್ತಾರೆ.
ಕಡಿಮೆ ಬಡ್ಡಿಗೆ ಸಾಲ: ಸರ್ಕಾರವು ಗುಡಿ ಕೈಗಾರಿಕೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡಿದರೆ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಯಂತ್ರಗಳನ್ನು ಖರೀದಿಸಿ ಬಟ್ಟೆಯನ್ನು ಉತ್ಪಾದಿಸಬಹುದು. ಜೊತೆಗೆ ಯುವ ಜನರಿಗೆ ಉದ್ಯೋಗ ಸಹ ನೀಡಬಹುದು. ಸರ್ಕಾರವು ಗುಡಿ ಕೈಗಾರಿಕೆಗೆ ಆರ್ಥಿಕ ನೆರವು ನೀಡಬೇಕು ಎಂದು ಕೃಷ್ಣದಾಸ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜೊತೆಗೆ ಈ ಹಿಂದೆ ಗುಡಿ ಕೈಗಾರಿಕೆ ಪ್ರಾರಂಭಿಸಿದಾಗ ವಿಶ್ವ ಕಟ್ಟಡಕ್ಕೆ ಯಾವುದೇ ಬಾಡಿಗೆ ವಿಧಿಸುವದಿಲ್ಲ ಎಂದು ಸಂಬಂಧ ಪಟ್ಟ ಇಲಾಖೆ ತಿಳಿಸಿತ್ತು. ಆದರೆ, 1996 ರಿಂದಲೂ ಬಾಡಿಗೆ ವಿಧಿಸುತ್ತಿದೆ. ಈ ಬಗ್ಗೆ ಸರ್ಕಾರವು ಗಮನ ನೀಡಿ ಗುಡಿ ಕೈಗಾರಿಕೆಗಾಗಿ ಈ ಹಿಂದೆ ಆಗಿದ್ದ ಒಪ್ಪಂದದಂತೆ ನಡೆದುಕೊಳ್ಳಲು ಸಂಬಂಧ ಪಟ್ಟ ಇಲಾಖೆಗೆ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರೋತ್ಸಾಹಿಸಬೇಕು: ಸರ್ಕಾರವು ನಿರುದ್ಯೋಗ ಸಮಸ್ಯೆ ಪರಿಹರಿಸಲು ಗುಡಿ ಕೈಗಾರಿಕೆ ಬಗ್ಗೆ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ. ಬೃಹತ್ ಕೈಗಾರಿಕೆಗಳ ಮದ್ಯೆ ಸಣ್ಣ ಮಟ್ಟದ ಗುಡಿ ಕೈಗಾರಿಕೆಗಳು ಬೆಳೆಯಬೇಕಾದರೆ ಆರ್ಥಿಕ ನೆರವು, ಸೂಕ್ತ ಸಲಹೆ ಅಗತ್ಯವಾಗಿದೆ.ಮಲೆನಾಡು ಭಾಗದಲ್ಲಿ ಪ್ರಥಮ ಬಾರಿಗೆ ನೇಯ್ಗೆಯಲ್ಲೇ ತಮ್ಮ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿ ಗುಡಿ ಕೈಗಾರಿಕೆ ನಡೆಸುತ್ತಿರುವ ಕೃಷ್ಣದಾಸ್ ಅಂತಹವರಿಗೆ ಸೂಕ್ತ ಮಾರ್ಗದರ್ಶನ, ಸರ್ಕಾರದಿಂದ ಸಿಗುವ ಸಹಾಯಧನ ನೀಡಿ ಪ್ರೋತ್ಸಾಹಿಸಬೇಕಾಗಿದೆ.