ಸಂಭ್ರಮದ ವಾಸವಿ ಜಯಂತಿ
ಕಡೂರು: ಪಟ್ಟಣದಲ್ಲಿ ವಾಸವಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಡೂರು ವೈಶ್ಯ ಸಮುದಾಯದಿಂದ ವಾಸವಿ ಜಯಂತಿ ಅಂಗವಾಗಿ ಛತ್ರದ ಬೀದಿಯ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.
ಅದ್ದೂರಿಯಾಗಿ ನಡೆದ ಜಯಂತಿಯಲ್ಲಿ ಶ್ರೀ ಕನ್ಯಕಾ ಪರಮೇಶ್ವರಿ ದೇವಿಯವರನ್ನು ಸೂರ್ಯನ ರಥದಲ್ಲಿ ಪುಷ್ಪಾಲಂಕೃತವಾದ ಕುದುರೆ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು, ಮಹಿಳೆಯರಿಂದ ಭಜನೆಗಳು ಪಾಲ್ಗೊಂಡಿದ್ದವು. ವೈಶ್ಯ ಸಮಾಜದ ಸುದರ್ಶನ್, ಡಿ. ಪ್ರಶಾಂತ್, ತ್ಯಾಗರಾಜ್, ಎಂ.ಎಲ್. ಬಾಲಕೃಷ್ಣ ಶೆಟ್ಟಿ, ಎಂ.ಎಲ್. ಶಶಿಧರ್ ಸೇರಿದಂತೆ ನೂರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.