ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗ್ರಾಮದೇವತೆಶ್ರೀ ಪೇಟೆಕೊಲ್ಲಾಪುರದಮ್ಮ ಸಿಡಿ

Lingaraj Badiger
Updated On : 25 May 2013, 11:00 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಮೇ 24
ನಗರದ ಗ್ರಾಮದೇವತೆ ಶ್ರೀ ಪೇಟೆಕೊಲ್ಲಾಪುರದಮ್ಮನವರ ಸಿಡಿ ಮಹೋತ್ಸವ ಶುಕ್ರವಾರ ಗೋಧೂಳಿ ಸಮಯದಲ್ಲಿ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ಸಂಜೆ ದೇವಿಯ ದೇವಸ್ಥಾನದಿಂದ ಭಕ್ತ ಸಮೂಹ ಎಂ.ಜಿ. ರಸ್ತೆಯ  ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿಂದ ಗೌರವಪೂರ್ಣವಾಗಿ ಶ್ರೀ ಬಸವ ಕಳಸವನ್ನು ಮಂಗಳವಾದ್ಯದೊಂದಿಗೆ ತರುವ ಮೂಲಕ ಸಿಡಿ ಉತ್ಸವಕ್ಕೆ ಚಾಲನೆ ದೊರೆಯಿತು.
ಅಲಂಕೃತ ದೇವಿಯ ಅಡ್ಡಪಲ್ಲಕ್ಕಿಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಶ್ರೀ ಪೇಟೆಕೊಲ್ಲಾಪುರದಮ್ಮ, ಶ್ರೀ ಮಣಿಯಮ್ಮ ಮತ್ತು ಚಿಕ್ಕಮ್ಮ ದೇವಿಯರು ಹಾಗೂ ಭೂತಪ್ಪ ದೇವರ ಆವಾಹನೆಯಾಯಿತು. ಮೈದುಂಬಿಗೊಂಡ ಗಣ ಮಕ್ಕಳಿಗೆ ಕುತ್ತಿಗೆ ಹಾಗೂ ಕಾಲಿಗೆ ಸರಪಳಿಯನ್ನು ತೊಡಿಸಲಾಯಿತು. ಕೆನ್ನೆಗೆ ತ್ರಿಶೂಲವನ್ನು ಚುಚ್ಚಿದ ನಂತರ ಮಂಗಳವಾದ್ಯಕ್ಕೆ ಅನುಗುಣವಾಗಿ ಕುಣಿತ, ಜನರ ಜಯಘೋಷ ಮುಗಿಲುಮುಟ್ಟಿತು.
ಸಿಡಿ ಕಂಬದ ಪೂಜೆ: ಶಾಸ್ತತಂಡ ಮೆರವಣಿಗೆಯಲ್ಲಿ ವಿಶೇಷ ಹೂವಿನಮಾಲೆಯನ್ನು ದೇವಿಗೆ ಸಮರ್ಪಿಸಿದ್ದು, ಪಟಾಕಿ ಸಿಡಿಮದ್ದುಗಳ ಅಬ್ಬರದ ನಡುವೆ ಸಿಡಿ ಕಂಬದ ಪೂಜೆ ನೆರವೇರಿತು.
ನಾಲ್ಕೂ ಗಣ ಮಕ್ಕಳನ್ನು ಸಿಡಿ ಕಂಬಕ್ಕೆ ಕಟ್ಟಿ ಮೂರು ಸುತ್ತು ಒಬ್ಬರಾದ ಮೇಲೆ ಒಬ್ಬರಂತೆ ಆಡಿಸಿದಾಗ ಭಕ್ತ ವೃಂದದ ಹರ್ಷೋದ್ಘಾರದ ನಡುವೆ ಜಯಘೋಷ ಮುಗಿಲುಮುಟ್ಟಿತು.  ಸೂರ್ಯ ಮರೆಯಾಗುತ್ತಿದ್ದರೂ ಅಲಂಕೃತ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಝಗಮಯಿಸಿದವು. ಹೂವು- ಬಾಳೆಹಣ್ಣು ತೂರಾಡಿದವು. ಗಣಮಕ್ಕಳು ಮೇಲಿಂದ ಪತ್ರೆ-ಹೂ-ಭಸ್ಮ ಎರಚಿ ಆಶೀರ್ವದಿಸಿದರು. ನಂತರ ಉತ್ಸವದ ಅಡ್ಡಪಲ್ಲಕ್ಕಿಯನ್ನು ಸಿಡಿ ಕಂಬಕ್ಕೆಕಟ್ಟಿ ಆಡಿಸಲಾಯಿತು. ಮೈದುಂಬಿದ ದೇವರ ಆಶೀರ್ವಾದ ಪಡೆಯಲು ಜನರ ನೂಕು ನುಗ್ಗಲಾಯಿತು. ಕೆಲಕ್ಷಣದ ನಂತರ ಶ್ರೀದೇವಿಗೆ ದೇವಸ್ಥಾನದಲ್ಲಿ ವಿಶೇಷಪೂಜೆ ನೆರವೇರಿಸುವುದರೊಂದಿಗೆ ಸಿಡಿ ಉತ್ಸವಕ್ಕೆ ತೆರೆಬಿತ್ತು.
ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಕೇಶವಮೂರ್ತಿ, ಖಜಾಂಚಿ ಬಿ.ಎನ್. ರಾಜಣ್ಣಶೆಟ್ಟಿ, ಉಪಾಧ್ಯಕ್ಷ ಎಚ್.ಎಸ್. ನಂಜಪ್ಪ, ನಿರ್ದೇಶಕರಾದ ಸಿ.ವಿ. ಕುಮಾರ್, ಹೊನ್ನಪ್ಪ, ಮೋಹನ, ನಗರಸಭಾ ಮಾಜಿ ಅಧ್ಯಕ್ಷ ಪ್ರೇಮ್‌ಕುಮಾರ್, ಸದಸ್ಯರಾದ ಲಕ್ಷ್ಮಣ ಮತ್ತು ತೇಜ, ಅರ್ಚಕರಾದ ಮೋಹನ್ ಮತ್ತು ಚಂದ್ರಶೇಖರ್ ಸಿಡಿ ಕಾರ್ಯಕ್ರಮದ ಮುಂಚೂಣಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement