ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಂಬದಹಳ್ಳ ಯೋಜನೆ ಶೀಘ್ರ ಟೆಂಡರ್

Lingaraj Badiger
Updated On : 25 May 2013, 11:06 am

ಕ.ಪ್ರ.ವಾರ್ತೆ ತರೀಕೆರೆ  ಮೇ 24
ತಾಲೂಕಿನ ಜಂಬದಹಳ್ಳ ಜಲಾಶಯ ಯೋಜನೆ ಕಾಮಗಾರಿಗೆ ರು. 34 ಕೋಟಿಯಲ್ಲಿ  ಶೀಘ್ರವೇ ಟೆಂಡರ್ ಕರೆಯುವ ಕಾರ್ಯ ನೆರವೇರಲಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ಶುಕ್ರವಾರ ಶಾಸಕರ ಕಾರ್ಯಾಲಯ ಪ್ರಾರಂಭವಾದ ಹಿನ್ನೆಲೆಯಲ್ಲಿ ತಾಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಿ.ಎಂ. ಸೂಚನೆ: ಜಂಬದಹಳ್ಳ ಜಲಾಶಯ ಯೋಜನೆ ಕಾಮಗಾರಿ ಪ್ರಾರಂಭಿಸಲು ಕುರಿತಂತೆ ಒಂದು ತಿಂಗಳಿನಲ್ಲೇ ಟೆಂಡರ್ ಕರೆಯುವ ಕಾರ್ಯವಾಗಲಿದೆ ಎಂದು ಈ ಬಗ್ಗೆ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಗಾಣಿಗಿತ್ತಿಹಳ್ಳ  ಭೀಮನಹಳ್ಳ ಕೆರೆ ಯೋಜನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ತಾಲೂಕಿನಲ್ಲಿ ಕುಡಿಯುವ ನೀರು ಒದಗಿಸಲು ತಾವು ಮೊದಲ ಆದ್ಯತೆ ನೀಡುವುದಾಗಿಯೂ, ಪಟ್ಟಣದ ರಾ.ಹೆ. ಅಭಿವೃದ್ಧಿ ಬಗ್ಗೆ ಕೂಡಲೇ ಗಮನ ಹರಿಸುವುದಾಗಿ ತಿಳಿಸಿದ ಅವರು ಎಲ್ಲ ಜನಾಂಗದವರು ನನಗೆ ಮತ ನೀಡಿದ್ದಾರೆ ಎಂದು ತಿಳಿಸಿ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಶೋಷಣೆ ತಪ್ಪಿಸಿ: ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿ, ಬಡವರಿಗೆ ಸಹಾಯ ಮಾಡುವಂತಹ ಕಾರ್ಯವನ್ನು ನಿರ್ವಹಿಸಿ,  ಶೋಷಣೆ ತಪ್ಪಿಸಬೇಕು. ಪಟ್ಟಣದಲ್ಲಿ ಬಯಲು ರಂಗ ಮಂದಿರವೊಂದೇ ಏಕೈಕ ವಿಶಾಲವಾದ ಸ್ಥಳ ಇರುವುದು, ಅದನ್ನು ಕಾಪಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಘನಿ ಮಾತನಾಡಿ, ಇದು ಸಂತೋಷದ ದಿನ, ಶಾಸಕರ ಕಚೇರಿಯಿಂದ ಸಾರ್ವಜನಿಕರಿಗೆ ಅನುಕೂಲವಾಗಲಿ, ಕಚೇರಿಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿ, ಬಯಲು ರಂಗ ಮಂದಿರವನ್ನು ಉಳಿಸಿಕೊಳ್ಳಿ, ಒಳ್ಳೆಯ ಸಲಹೆಗಳನ್ನು ಸ್ವೀಕರಿಸಿ ಎಂದು ತಿಳಿಸಿದರು.
ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್. ಧೃವಕುಮಾರ್, ಈಶ್ವರಪ್ಪ ಮೊದಲಾದವರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಖಚಾಂಚಿ ಬಿ.ಎಸ್.ಆರ್. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಚ್. ವಿಶ್ವನಾಥ್ ಅಲ್ಪಸಂಖ್ಯಾತರ ತಾಲೂಕು ಅಧ್ಯಕ್ಷ ಸಮೀವುಲ್ಲ,  
ಪುರಸಭೆ ಸದಸ್ಯ ಟಿ.ಎಸ್.ಧರ್ಮರಾಜ, ಪ್ರಕಾಶ ವರ್ಮ, ರಮೇಶ, ಮಂಜುನಾಥ ಪ್ರಸಾದ, ಮೋಹನ ಕುಮಾರ್, ಎಚ್.ಎನ್. ಮಂಜುನಾಥ, ಕೃಷ್ಣಮೂರ್ತಿ, ರವಿಶ್ಯಾನುಭೋಗ್, ಗಂಗಾಧರಪ್ಪ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಾಸಕರ ಕಾರ್ಯಾಲಯ ಪ್ರಾರಂಭಿಸಲಾಯಿತು.

ರಾಜ್ಯದಲ್ಲೇ ಮಾದರಿ ಆಸ್ಪತ್ರೆ
ತರೀಕೆರೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ರಾಜ್ಯದಲ್ಲೇ ಮಾದರಿ ಆಸ್ಪತ್ರೆಯನ್ನಾಗಿಸಲು ಸರ್ವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತರೀಕೆರೆ ಸಾರ್ವಜನಿಕ ಆಸ್ಪತ್ರೆ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ. ಸಾರ್ವಜನಿಕರಿಗೆ ಇನ್ನೂ ಹೆಚ್ಚು ಅನುಕೂಲ ಮತ್ತು ವೈದ್ಯರ ಸೌಲಭ್ಯ ಕಲ್ಪಿಸಿ ರಾಜ್ಯದಲ್ಲೇ ಮಾದರಿ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಆಶಯ ಹೊಂದಿದ್ದೇನೆ ಎಂದರು.
ಕಾಲೇಲು ಕಟ್ಟಡ: ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಶೌಚಾಲಯ ವ್ಯವಸ್ಥೆಯಾಗಬೇಕು ಎಂದು ತಿಳಿಸಿದ ಅವರು, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ ಕಾರ್ಯದಲ್ಲೂ ಎಲ್ಲಾ ಇಲಾಖೆಯ ಅಧಿಕಾರಿಗಳೊಡನೆ ಚರ್ಚಿಸಿ  ನೆಡೆಸಿದ್ದೇನೆ, ಶೀಘ್ರದಲ್ಲೇ ಕಾಲೇಜು ಕಟ್ಟಡ ನಿರ್ಮಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲೂಕಿನ ಸುಮಾರು 70 ಕೆರೆಗಳಿಗೆ ನೀರು ಹಾಯುವಳಿ ಮಾಡಲು ಪ್ರಯತ್ನಿಸಲಾಗಿದೆ, ಕುಡ್ಲೂರು, ಕೊರಟೀಕರೆ ಸುತ್ತಮುತ್ತ ಕೆರೆಗಳಿಗೂ ಭದ್ರಾ ನದಿಯಿಂದ ನೀರು ಒದಗಿಸಲಾಗುವುದು. ಜನರ ನಂಬಿಕೆ ಉಳಿಸಿಕೊಂಡು ಎಲ್ಲರ ಸಹಕಾರದಿಂದ ತಾಲೂಕನ್ನು ಅಭಿವೃದ್ಧಿಪಡಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement