ಶ್ರೀ ಕಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
ಕ.ಪ್ರ.ವಾರ್ತೆ, ಕಡೂರು, ಮೇ 24
ತಾಲೂಕಿನ ಇತಿಹಾಸ ಪ್ರಸಿದ್ಧ ಸಿಂಗಟಗೆರೆಯ ಶ್ರೀ ಕಲ್ಲೇಶ್ವರ ಸ್ವಾಮಿಯವರ ಬ್ರಹ್ಮ ರಥೋತ್ಸವ ಶುಕ್ರವಾರ ಅದ್ಧೂರಿಯಾಗಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.
ರಾಜ್ಯದ ಎಲ್ಲೆಡೆಯಿಂದ ಬಂದಿದ್ದ ಸಾವಿರಾರು ಭಕ್ತರು ಸುಡು ಬಿಸಿಲನ್ನು ಲೆಕ್ಕಿಸದೆ ಶ್ರೀ ಸ್ವಾಮಿಯವ ಕೃಪೆಯನ್ನು ಕೋರುವ ಮೂಲಕ ರಥವನ್ನು ಎಳೆದು, ದರ್ಶನ ಪಡೆದು ಪುನೀತರಾದರು.
ಶ್ರೀ ಕಲ್ಲೇಶ್ವರ ಸ್ವಾಮಿಯವರಿಗೆ ಋುತ್ವಿಜರಿಂದ ವಿಶೇಷ ಅಲಂಕಾರ, ಹೋಮ, ಹವನಾದಿಗಳು ನೆರವೇರುವ ಮೂಲಕ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ವೀರಗಾಸೆ, ನಾದಸ್ವರ, ಡೊಳ್ಳು ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಶ್ರೀ ಸ್ವಾಮಿಯವರನ್ನು ಪುಷ್ಪಾಲಂಕೃತ ವಾಹನದಲ್ಲಿ ಕುಳ್ಳಿರಿಸಿ ದೃಷ್ಟಿಪೂಜೆ ನೆರವೇರಿಸಿದ ನಂತರ ರಾಜ ಬೀದಿಗಳಲ್ಲಿ ಜಯಘೋಷಗಳೊಂದಿಗೆ ಶ್ರೀ ಸ್ವಾಮಿಯವರ ಕೀರ್ತನೆ, ಭಜನೆ ಮತ್ತು ಭಕ್ತಿಗೀತೆಗಳನ್ನು ಪಠಿಸುತ್ತಾ ಗ್ರಾಮದಾದ್ಯಂತ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ನಂತರ ದೇವಾಲಯದ ಸುತ್ತಲೂ ನೆರೆದಿದ್ದ ಸಾವಿರಾರು ಭಕ್ತರು ಶ್ರೀ ಸ್ವಾಮಿಯ ಮೆರವಣಿಗೆ ಬರುತ್ತಿದ್ದಂತೆಯೇ ರಥ ಎಳೆಯಲು ಜಮಾಯಿಸಿದರು. ದೇವರಿಗೆ ನಮಸ್ಕರಿಸುತ್ತಾ ಶ್ರೀ ಕಲ್ಲೇಶ್ವರ ಸ್ವಾಮಿಯವರಿಗೆ ಜಯವಾಗಲಿ ಎಂದು ಕೂಗಿದ ಘೋಷಣೆ ಕೂಗಿದರು.
ರಥದ ಮೇಲೆ ಬಾಳೆಹಣ್ಣು ಎಸೆಯುತ್ತಾ ರಥ ಎಳೆದ ನಂತರ ಹರಕೆ ಹೊತ್ತ ಭಕ್ತರು ತಮ್ಮ ಹರಕೆ ತೀರಿಸಲು ರಥದ ಸುತ್ತ ಉರುಳು ಸೇವೆ ಮಾಡಿದರು.
ನಂತರ ಕೊಡಪಾನದಲ್ಲಿದ್ದ ಪುಣ್ಯದ ನೀರನ್ನು ಮೈಗೆ ಹಾಕಿಸಿಕೊಳ್ಳುತ್ತಿದ್ದ ದೃಶ್ಯ ಜನರ ಭಕ್ತಿಯ ಪರಾಕಾಷ್ಟೆ ಮುಟ್ಟಿತ್ತು. ಸಿಂಗಟಗೆರೆ ಸೇರಿದಂತೆ ಸುತ್ತಲಿನ ಏಳು ಹಳ್ಳಿಗಳಿಂದ ಬಂದಿದ್ದ ನೂರಾರು ಪಾನಕದ ಗಾಡಿಗಳು ರಥದ ಸುತ್ತ ಸುತ್ತ ಪ್ರದಕ್ಷಿಣೆ ಹಾಕಿದರು.