ನೂತನ ಶಾಸಕ ವೈ.ಎಸ್.ವಿ. ದತ್ತಗೆ ಸನ್ಮಾನ
ಕಡೂರು: ಕ್ಷೇತ್ರದ ಜನತೆ ತಮ್ಮ ಅಮೂಲ್ಯವಾದ ಮತಗಳನ್ನು ಅಲ್ಪ ಸಂಖ್ಯಾತನಾದ ನನಗೆ ನೀಡಿ ಗೆಲ್ಲಿಸಿದ್ದು, ಅದಕ್ಕೆ ನಾನು ಋುಣಿಯಾಗಿದ್ದೇನೆ ಎಂದು ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ತಮ್ಮ ಹುಟ್ಟೂರಾದ ಯಗಟಿ ಗ್ರಾಮದ ಕಳ್ಳಿ ಬೀರಲಿಂಗೇಶ್ವರ ಸಮುದಾಯಭವನದಲ್ಲಿ ಕುರುಬ ಸಮಾಜ ಮತ್ತು ಗ್ರಾಮಸ್ಥರು ವಿಶೇಷ ರೀತಿಯಲ್ಲಿ ಕಂಬಳಿ ಹೊದಿಸುವ ಮೂಲಕ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯನವರು ನನ್ನ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದು, ಅವರ ಪ್ರೀತಿಯಿಂದ ಕ್ಷೇತ್ರಕ್ಕೆ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳನ್ನು ತರುತ್ತೇನೆ ಎಂದರು.
ಒಂದು ವೇಳೆ ಕಾಂಗ್ರೆಸ್ ಪಕ್ಷದವರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಮಾಡಿದಲ್ಲಿ ನೀವು ನನ್ನೊಂದಿಗೆ ಹೋರಾಟಕ್ಕೆ ಕೈ ಜೋಡಿಸಬೇಕು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹೀನ ರಾಜಕಾರಣ ಮಾಡುವುದಿಲ್ಲ. ಜೂನ್ 12ರ ನಂತರ ಕ್ಷೇತ್ರದ ಆಡಳಿತ ಯಂತ್ರವನ್ನು ಎಲ್ಲೆಲ್ಲಿ ಸರಿಪಡಿಸಬೇಕೋ ಅದರ ಬಗ್ಗೆ ಚಿಂತನೆ ನಡೆಸಿ ನಿರ್ಧಾರ ಕೈಗೊಂಡು ಕ್ಷೇತ್ರಕ್ಕೆ ಏನೇನು ಆಗಬೇಕೋ ಅದನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು. ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಢಾರಿ ಶ್ರೀನಿವಾಸ್ ಮಾತನಾಡಿ, ಜನರು ದತ್ತರವರನ್ನು ಪ್ರೀತಿ ತೋರಿಸುವ ಮೂಲಕವೇ ಗೆಲ್ಲಿಸಿದ್ದಾರೆ. ಆದರೆ ತಾಲೂಕಿನ ಶಾಶ್ವತ ನೀರಾವರಿ ಹೆಬ್ಬೆ ಮತ್ತು ಭದ್ರಾದಿಂದ ನೀರು ತರುವ ಯೋಜನೆಗೆ ಜಾರಿಗೆ ಪ್ರಯತ್ನಿಸಲಿದ್ದಾರೆ ಎಂದರು. ವೈ.ಎಸ್. ರವಿಪ್ರಕಾಶ್ ಮಾತನಾಡಿದರು. ಜಿಪ ಸದಸ್ಯೆ ಚಿಕ್ಕಮ್ಮ, ಕೆ.ಎಂ. ಮಹೇಶ್ವರಪ್ಪ, ಭಂಢಾರಿ ಶ್ರೀನಿವಾಸ್, ಬಿ.ಪಿ. ನಾಗರಾಜ್, ಟಿ. ಚಂದ್ರಪ್ಪ, ವೈ.ಎಂ. ಸಿದ್ದಯ್ಯ, ಸಾಕಮ್ಮ ಗೋವಿಂದಪ್ಪ, ವೈ.ಎಚ್. ಮಂಜುನಾಥ್, ವೈ.ವಿ. ನಾಗಣ್ಣ, ಗೋ. ಮಲ್ಲಪ್ಪ ಇದ್ದರು.