ಸುದ್ದಿ ಸಂಕ್ಷೇಪ
ಅರ್ಜಿ ಆಹ್ವಾನ
ಕೊಪ್ಪ: ತಾಲೂಕಿನ ಬಿಸಿಎಂ ಇಲಾಖೆಯ ಮೇಟ್ರಿಕ್ ಪೂರ್ವ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ 2012-13 ಸಾಲಿನಲ್ಲಿ ಹೊಸದಾಗಿ ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪದ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ, ಜಯಪುರ ಮತ್ತು ಬಸರೀಕಟ್ಟೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ದೂರ ದೃಢಿಕರಣ ಪತ್ರ ಮಾಹಿತಿಗಾಗಿ ಬಿಸಿಎಂನ ತಾಲೂಕು ವಿಸ್ತೀರ್ಣ ಅಧಿಕಾರಿ ನಂಡುಪ್ಪ 9481653388 ಸಂಪರ್ಕಿಸಿ.
28ಕ್ಕೆ ವಿದ್ಯುತ್ ವ್ಯತ್ಯಯ
ತರೀಕೆರೆ: ನೇರಲೆಕೆರೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹೊಸ ಪರಿವರ್ತಕ ಅಳವಡಿಸಿರುವ ಪ್ರಯುಕ್ತ ಒಳ ಬರುವ 110 ಕೆ.ವಿ.ಕಡೂರು ಲೈನನ್ನು ಬೃಹತ್ ಕಾಮಗಾರಿ ವಿಭಾಗದ ಸಿಬ್ಬಂದಿ 28 ರಂದು ಜಿಒಎಸ್ ಅಳವಡಿಸುವುದಕ್ಕೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾರ್ಗ ಮುಕ್ತತೆ ತೆಗೆದುಕೊಳ್ಳವ ಪ್ರಯಕ್ತ ಆದಿನ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನೇರಲೆಕೆರೆ ಹಾಗೂ ತರೀಕೆರೆ ವಿದ್ಯುತ್ ವಿತರಣಾ ಕೇಂದ್ರದ ಎಲ್ಲಾ ಹೊರ ಹೋಗುವ ಫೀಡರ್ಗಳು ವಿದ್ಯುತ್ ವ್ಯತ್ಯಯವಾಗುತ್ತಿದ್ದು ತರೀಕೆರೆ ಹಾಗೂ ನೇರಲೆಕೆರೆ ವಿವಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಹಕರು ಸಹಕರಿಸಬೇಕೆಂದು ತರೀಕೆರೆ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಇಂದು ಗೃಹ ಸಚಿವರ ಭೇಟಿ
ಚಿಕ್ಕಮಗಳೂರು: ರಾಜ್ಯದ ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಭಾನುವಾರ ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಹೆಲಿಕ್ಯಾಪ್ಟರ್ನಲ್ಲಿ ನಗರಕ್ಕೆ ಆಗಮಿಸಲಿರುವ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಜತೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೂ ಭೇಟಿ ನೀಡಿ, ಮಧ್ಯಾಹ್ನ 4 ಗಂಟೆಗೆ ಬೆಂಗಳೂರಿಗೆ ವಾಪಸ್ ತೆರಳಲಿದ್ದಾರೆ.
ನಾಳೆ ವರ್ತಕರ ಸಂಘದ ಉದ್ಘಾಟನೆ
ಭದ್ರಾವತಿ: ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಭದ್ರಾವತಿ ನಗರ ವರ್ತಕರ ಸಂಘವನ್ನು ಮಂಗಳವಾರ ಸಂಜೆ 5 ಗಂಟೆಗೆ ಜೈನ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶಾಸಕ ಎಂ.ಜೆ. ಅಪ್ಪಾಜಿ ಉದ್ಘಾಟನೆ ಮಾಡಲಿರುವರು. ತಹಸೀಲ್ದಾರ್ ಸಿದ್ದಮಲ್ಲಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಡಿ.ಆರ್. ವಿಶ್ವನಾಥ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಣಾಧಿಕಾರಿ ಎಂ.ಎಸ್. ಹಿಪ್ಪರಗಿ, ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಪಿ. ವಿಶ್ವನಾಥ್ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ವಿ. ವಸಂತಕುಮಾರ್, ಬಿ.ಜೆ. ಮರಿಯಪ್ಪ ಆಗಮಿಸುವರು. ಎಚ್.ಎಸ್. ಗುರುರಾಜಾರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಭದ್ರಾವತಿ ನಗರ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಎಸ್. ಗುರುರಾಜಾರಾವ್, ಉಪಾಧ್ಯಕ್ಷರಾಗಿ ಕೆ.ವಿ. ಹರೀಶ್ಬಾಬು, ಕಾರ್ಯದರ್ಶಿಯಾಗಿ ಡಿ.ಎನ್. ಅಶೋಕ, ಸಹಕಾರ್ಯದರ್ಶಿಗಳಾಗಿ ಸಿ.ಎನ್. ಗಿರೀಶ್ ಮತ್ತು ಭವರ್ಲಾಲ್, ಖಜಾಂಚಿಯಾಗಿ ವಾದಿರಾಜ್ ಅಡಿಗ ಹಾಗೂ ನಿರ್ದೇಶಕರಾಗಿ ಭರತ್ ಕುಮಾರ್ಪಾಲ್ರೇಚಾ, ಕೆ.ಎಚ್. ಶ್ರೀವತ್ಸ, ಬಿ.ಸಿ. ಲೋಕೇಶ್, ಪಿ. ವಿಶ್ವನಾಥ, ಬಿ.ಆರ್. ವೆಂಕಟೇಶಮೂರ್ತಿ, ಪಿ. ರಾಜ್ಕುಮಾರ್, ಇ. ಪ್ರಕಾಶ್ ಮತ್ತು ಮಹಮದ್ ಸಿರಾಜ್ ಆಯ್ಕೆಯಾಗಿದ್ದಾರೆ.
'ಸಚಿವರ ಆದೇಶಕ್ಕೂ ಕಿಮ್ಮತ್ತಿಲ್ಲ'
ಶಿವಮೊಗ್ಗ: ಪಶುವೈದ್ಯ ಇಲಾಖೆ ಸಚಿವರು ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಕಣ್ಣೊರೆಸುವುದಕ್ಕೆ ಇಂತಹದ್ದೊಂದು ಆದೇಶ ನೀಡಿದರೋ ಅಥವಾ ಅಧಿಕಾರಿಗಳು ಬೇಕಂತಲೇ ನಿರ್ಲಕ್ಷಿಸುತ್ತಿದ್ದಾರೋ ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ಶಿವಮೊಗ್ಗ ಮತ್ತು ಹಾಸನದ ಪಶುವೈದ್ಯ ಕಾಲೇಜಿನಲ್ಲಿ ಪದವಿ ಪಡೆದು ಹೊರಬಂದಿರುವ 72 ಪದವೀಧರರ ಸಮಸ್ಯೆ ಬಗೆಹರಿಯುತ್ತಿಲ್ಲ. ಒಂದೆಡೆ ಪಶುವೈದ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮುಂದಿನ 10 ವರ್ಷಗಳ ಕಾಲ ರಾಜ್ಯದ ಪಶುವೈದ್ಯ ಕಾಲೇಜುಗಳಿಂದ ಹೊರಬರುವ ಎಲ್ಲರನ್ನೂ ನೇಮಕ ಮಾಡಿಕೊಳ್ಳುವ ಪರಿಸ್ಥಿತಿ ಇದೆ.
ಇನ್ನೊಂದೆಡೆ ಸರ್ಕಾರವೇ ತನ್ನದೇ ತಪ್ಪಿನಿಂದಾದ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಅವರ ನೇಮಕಕ್ಕೆ ಅಡ್ಡಿಯಾಗುತ್ತಿದೆ.
ಹಾಲಿ 391 ಪಶುವೈದ್ಯರ ನೇಮಕಾತಿ ಪ್ರಕ್ರಿಯೆನ್ನು ಸುಪ್ರೀಂಕೋರ್ಟ್ ಕೇಸಿನ ತೀರ್ಮಾನ ಆಗುವವರೆಗೂ ಮುಂದೂಡುವಂತೆ ಪಶುವೈದ್ಯ ಸಚಿವ ಟಿ.ಬಿ. ಜಯಚಂದ್ರ ಅವರು ಆದೇಶಿಸಿದ್ದರೂ ಸಹ ಇಲಾಖೆ ಅಧಿಕಾರಿಗಳು ಕ್ಯಾರೇ ಎನ್ನದೇ ಈ 72 ಪದವೀಧರರ ಅರ್ಜಿ ಹೊರತುಪಡಿಸಿ ಸೋಮವಾರದಿಂದ ಉಳಿದವರ ಅರ್ಜಿ ಪರಿಶೀಲನೆ ನಡೆಸುವುದಾಗಿ ಹೇಳುತ್ತಿದ್ದಾರೆ.
31ರಂದು ತಾಪಂ ಸಭೆ
ಚಿಕ್ಕಮಗಳೂರು: ತರೀಕೆರೆ ತಾಪಂ ಸರ್ವ ಸದಸ್ಯರ ಸಭೆ ಮೇ 31ರಂದು ಬೆಳಗ್ಗೆ 10.30ಕ್ಕೆ ತರೀಕೆರೆ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಆಧ್ಯಕ್ಷೆ ಎನ್.ಇ. ದೀಪ ಉಮೇಶರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಐ.ಟಿ.ಐ. ಪ್ರವೇಶಕ್ಕೆ ಅರ್ಜಿ ಆಹ್ವಾನ
ತರೀಕೆರೆಯ ಬಿ.ಎಚ್. ರಸ್ತೆಯಲ್ಲಿರುವ ಗುರುಭವನದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐ.ಟಿ.ಐ. ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಕೋಪಾ, ವಿದ್ಯಾತ್ ಶಿಲ್ಪಿ, ವಿದ್ಯುನ್ಮಾನ ದುರಸ್ತಿಗಾರ, ಜೋಡಣೆ ಹಾಗೂ ಚರಕೀಯ ವೃತ್ತಿ ಕೊರ್ಸ್ಗಳಿಗೆ ಅವಕಾಶವಿದು, ಅರ್ಜಿ ಸಲ್ಲಿಸಲು ಮೇ 31 ಕೊನೆದಿನ. ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ತರಬೇತಿ ಸಂಸ್ಥೆ ಕಚೇರಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
ಮಾವಿನಲ್ಲಿ ಮೂಡಿದ ಮೋದಕ ಪ್ರಿಯ
ತರೀಕೆರೆ: ಭಗವಂತ ಭಕ್ತರಿಗೆ ವಿವಿಧ ರೂಪದಲ್ಲಿ ದರ್ಶನ ಕೊಡುತ್ತಾನಂತೆ. ಇಲ್ಲೂ ಹಾಗೇ ಆಗಿದೆ. ಇದು ಮಾವಿನ ಹಣ್ಣಿನ ಕಾಲ. ಮಾವಿನ ಹಣ್ಣಿನಲ್ಲೂ ದೇವರ ಚಿತ್ರ ಮೂಡಿ ಬಂದಿದೆ.
ಮಾವಿನಲ್ಲಿ ಮೋದಕ ಪ್ರಿಯ ಗಣಪ ಹೀಗೆ ಕಾಣಿಸಿಕೊಂಡಿದ್ದಾನೆ. ತಿದ್ದಿಟ್ಟ ಕಣ್ಣು, ಉದ್ದನೆಯ ಸೊಂಡಿಲು, ಉಬ್ಬಿದ ಉದರ ಸಾಕ್ಷಾತ್ ಗಣಪತಿಯ ದರ್ಶನ. ಪಟ್ಟಣದ ಖಾಲಿಕ್ ಅಹಮದ್ ತೋಟದ ಮಾವಿನ ಮರದಲ್ಲಿ ಸ್ಪಷ್ಟ ಗಣಪತಿಯ ಅಕಾರ ಮಾವಿನಲ್ಲಿ ಕಾಣಿಸಿಕೊಂಡಿದೆ.
ಮುಂದುವರೆದ ಬಿಸಿಲು
ಶೃಂಗೇರಿ: ತಾಲೂಕಿನಾದ್ಯಂತ ಬಿಸಿಲ ಧಗೆ ಮುಂದುವರೆದಿದ್ದು, ಕಳೆದೆರೆಡು ದಿನಗಳ ಹಿಂದೆ ಬಂದು ಹೋದ ಮಳೆ ಹೊರತು ಪಡಿಸಿದರೆ ಮತ್ತೆ ಮಳೆಯೇ ಇಲ್ಲ. ಬಸಿಲಿನ ತಾಪ ತೀವ್ರವಾಗಿದ್ದು ಹಳ್ಳ, ಕೆರೆ, ಭಾವಿಗಳಲ್ಲಿ ಇದ್ದ ನೀರು ಬತ್ತಿ ಹೋಗಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಇದೇ ರೀತಿ ಬಿಸಿಲ ವಾತಾವರಣ ಮುಂದುವರೆದರೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಲಿದೆ.