ಅರಿವು ಮೂಡಿಸುವುದೇ 'ಆರ್ಥಿಕ ಸಾಕ್ಷರತೆ' ಉದ್ದೇಶ
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಮೇ 26 ಗ್ರಾಮೀಣರಿಗೆ ಬ್ಯಾಂಕಿನ ಸೇವೆಗಳ ಬಗ್ಗೆ ಅರಿವು ಮೂಡಿಸುವುದೇ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಆರ್ಥಿಕ ಸಾಕ್ಷರತಾ ಅಧಿಕಾರಿ ಆನಂದ ಆಚಾರ್ಯ ತಿಳಿಸಿದರು.
ಅವರು ಭಾನುವಾರ ಲಿಂಗಾಪುರದ ಸಮುದಾಯ ಭವನದಲ್ಲಿ ರಾಷ್ಟೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಶ್ರಯದಲ್ಲಿ ಯಕ್ಷಗಾನ ಪ್ರದರ್ಶನದ ಮೂಲಕ ನಡೆದ ಜನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಅರಿವು ಮಾಡಿಸಲಾಗುವುದು: ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಡಿ ಯಕ್ಷಗಾನದ ಮೂಲಕ ಉಳಿತಾಯ, ವಿಮೆ ಯೋಜನೆಯಲ್ಲಿ ಹಣ ಹೂಡಿಕೆ, ಸಾಲ ಪಡೆಯವುದು, ಹಣ ರವಾನೆ ಬಗ್ಗೆ ಅರಿವು ಮೂಡಿಸಲಾಗುವುದು. ಹಣ ಇಲ್ಲದಿದ್ದರೂ ಬ್ಯಾಂಕಿನಲ್ಲಿ ಖಾತೆ ತೆರೆಯುವ ಅವಕಾಶವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದ್ದು, ಪ್ರತಿಯೊಬ್ಬರೂ ಯಾವುದೇ ಬ್ಯಾಂಕಿನಲ್ಲೂ ಸಹ ಖಾತೆ ತೆರೆಯಬಹುದು ಎಂದರು.
ಇತ್ತೀಚೆಗೆ ಸರ್ಕಾರದ ಅನುದಾನ ನೇರವಾಗಿ ಬ್ಯಾಂಕಿನ ಖಾತೆಗೆ ಜಮಾ ಆಗಲಿದೆ. ಇದರಿಂದಾಗಿ ಪ್ರತಿಯೊಬ್ಬರೂ ಬ್ಯಾಂಕಿನಲ್ಲಿ ಖಾತೆ ತೆರೆಯುವುದು ಅವಶ್ಯಕ. ಜಿಲ್ಲೆಯಲ್ಲಿ ಆರ್ಥಿಕ ಕೇಂದ್ರ ಸ್ಥಾಪಿಸಿ ಹಳ್ಳಿ ಜನರಿಗೆ ಬ್ಯಾಂಕಿಂಗ್ ಸೇವೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ತಿಳಿಸಿದರು.
ಸಾಕ್ಷರತಾ ಜಾಗೃತಿ: ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಅನುರಾಧಾ ಎ. ನರಹರಿ ಮಾತನಾಡಿ, ಜಿಲ್ಲೆಯಲ್ಲಿ ಆರ್ಥಿಕ ಸಾಕ್ಷರತೆ ಬಗ್ಗೆ ಈಗಾಗಲೇ 50 ಸ್ಥಳಗಳಲ್ಲಿ ಯಕ್ಷಗಾನದ ಮೂಲಕ ಸಾಕ್ಷರತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಯಲು ಸೀಮೆಯಲ್ಲೇ 35 ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಮಲೆನಾಡಿನ ಭಾಗದಲ್ಲಿ ನರಸಿಂಹರಾಜಪುರ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆಯುತ್ತಿರುವ ಯಕ್ಷಗಾನವೇ ಪ್ರಥಮ ಕಾರ್ಯಕ್ರಮವಾಗಿದೆ. ಜೂನ್ 18ರವರೆಗೂ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಯಕ್ಷಗಾನ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ಮೆಣಸೂರು ಗ್ರಾಪಂ ಸದಸ್ಯ ರವಿಚಂದ್ರ ಚಂಡೆ ಬಾರಿಸುವ ಮೂಲಕ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಸದಸ್ಯ ಡಯನಾ, ಗ್ರಾಮದ ಮುಖಂಡ ಚಂದ್ರಶೇಖರ್ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ಬೆಂಗಳೂರಿನ ಕರ್ನಾಟಕ ಕಲಾ ದರ್ಶನಿ ತಂಡದವರು ಯಕ್ಷಗಾನದ ಮೂಲಕ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಅರಿವು ಮೂಡಿಸಿದರು.