ಗುತ್ತಿಗೆದಾರರಿಂದ ಪಡೆದ ಹಣ ವಾಪಸ್
ಕ.ಪ್ರ.ವಾರ್ತೆ,ಮೂಡಿಗೆರೆ, ಮೇ26 ಕಡೂರು- ಮಂಗಳೂರು ರಾಜ್ಯ ಹೆದ್ದಾರಿ ರಸ್ತೆ ಕಾಂಕ್ರಿಟ್ ಕಾಮಗಾರಿ ಗುತ್ತಿಗೆದಾರರಿಂದ ಗ್ಯಾರೇಜ್ ಸಂಘದ ಹೆಸರಿನಲ್ಲಿ ವ್ಯಕ್ತಿಯೊಬ್ಬ ಪಡೆದಿದ್ದ ರು. 45,000 ಹಿಂತಿರುಗಿಸಿದ ಪ್ರಕರಣ ಗಂಗನಮಕ್ಕಿಯಲ್ಲಿ ನಡೆತು.
ಮಟನ್ ಮಾರ್ಕೆಟ್ನಿಂದ ಗಣಪತಿ ದೇವಸ್ಥಾನದ 700 ಮೀಟರ್ ರಸ್ತೆಯು ರು. 1.7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಕಾಮಗಾರಿ ಗುತ್ತಿಗೆದಾರರಿಂದ ಗ್ಯಾರೇಜ್ ಸಂಘ ಹಣ ಪಡೆದಿರುವ ಮಾಹಿತಿಯು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದರಿಂದ ಗ್ಯಾರೆಜ್ ಕೆಲಸಗಾರರು ಅಸಮಾಧಾನಗೊಂಡಿದ್ದರು.
ವಿಷಯ ಬಯಲು: ಈ ಬಗ್ಗೆ ಫ್ರಾನ್ಸಿಸ್ ಎಂಬುವನನ್ನು ವಿಚಾರಿಸಿದಾಗ ನಿಜ ವಿಷಯ ಬಯಲಾಗಿತ್ತು. ಹಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದರಿಂದ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದ ಗ್ಯಾರೇಜ್ ಕೆಲಸಗಾರರು ಹಣವನ್ನು ಗುತ್ತಿಗೆದಾರರಿಗೆ ಹಿಂತಿರುಗಿಸುವುದಾಗಿ ಪ್ರಕಟಿಸಿದ್ದರು.
ನಂತರ ಗುತ್ತಿಗೆದಾರರ ರೈಟರ್ ಕಿರಣ್ ಅವರು ಫ್ರಾನ್ಸಿಸ್ನಿಂದ ಹಣ ಪಡೆದು ಸಾರ್ವಜನಿಕವಾಗಿ ಮಾತನಾಡಿ, ಇತ್ತೀಚೆಗೆ ಪಪಂ ಚುನಾವಣೆಯಲ್ಲಿ ಗಂಗನಮಕ್ಕಿಂದ ಬಿಜೆಪಿ ಅಭರ್ಥಿ ಸ್ಪರ್ಧಿಸಿದ್ದು, ಚುನಾವಣೆಗೆ ಸಹಾಯ ಮಾಡುವಂತೆ ಗುತ್ತಿಗೆದಾರರಲ್ಲಿ ವಿನಂತಿಸಿಕೊಂಡಿದ್ದರ ಪರಿಣಾಮ ಗುತ್ತಿಗೆದಾರರು ಸ್ವ ಇಚ್ಚೆಯಿಂದ ಹಣವನ್ನು ನೀಡಿದ್ದು. ಇದರಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ ಎಂದರು. ಗುತ್ತಿಗೆದಾರರು ಯಾವುದೇ ಸಂಘಕ್ಕೆ ಹಣ ನೀಡಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಅಕ್ರಮ ಮರಳು: ಇದರ ಬೆನ್ನಿಗೆ ಗಂಗನಮಕ್ಕಿ ಕಾಂಕ್ರಿಟ್ ರಸ್ತೆ ಕಾಮಗಾರಿ ಸಂಬಂಧ ಅಂದಾಜು ರು. 18 ಲಕ್ಷವನ್ನು ವಿವಿಧ ಮುಖಂಡರಿಗೆ ಮತ್ತು ಅಧಿಕಾರಿಗಳಿಗೆ ನೀಡಿರುವ ಆರೋಪ ವ್ಯಕ್ತವಾಗತೊಡಗಿವೆ. ಅಲ್ಲದೇ ಕಾಮಗಾರಿಗೆ ಹೇಮಾವತಿ ನದಿಯಿಂದ ಅಕ್ರಮ ಮರಳು ಸಾಗಿಸಿ ಸಂಗ್ರಹಿಸಲಾಗುತ್ತಿರುವ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಬಿಸಿ, ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಈ ವೇಳೆ ಬಿಎಸ್ಪಿ ಮುಖಂಡ ಲೋಕವಳ್ಳಿ ರಮೇಶ್, ಜೆಡಿಎಸ್ ಮುಖಂಡ ಜಗದೀಶ್, ಯಾದ್ಗಾರ್ ಇಬ್ರಾಹಿಂ, ತೋಮಸ್, ಕಿರಣ್, ಪ್ರಕಾಶ್ ಇದ್ದರು.