ಡಿಎಸ್ಎಂಎಸ್ ಸಂಸ್ಥೆ 95 ಸಾವಿರ ನಿವ್ವಳ ಲಾಭ
ಚಿಕ್ಕಮಗಳೂರು: ಡಿಎಸ್ಎಂಎಸ್ ಸಂಸ್ಥೆ 95 ಸಾವಿರ ನಿವ್ವಳ ಲಾಭಗಳಿಸಿದೆ ಎಂದು ಅಧ್ಯಕ್ಷ ಕೆ.ಆರ್. ಕನಕರಾಜ್ ಹೇಳಿದ್ದಾರೆ.
ನಗರದ ಮಲ್ಲಂದೂರು ವೃತ್ತದ ಡಿಎಸ್ಎಂಎಸ್ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಸಿಮೆಂಟ್ ಏಜೆನ್ಸಿ ಪಡೆದು ವಹಿವಾಟು ನಡೆಸಲು ತೀರ್ಮಾನಿಸಿದ್ದು, ಬೆತ್ತ ಮತ್ತು ಅಗರಬತ್ತಿ ತರಬೇತಿಗೆ ಯೋಜನೆ ರೂಪಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು ಎಂದು ಹೇಳಿದರು.
ಕಳೆದ ಸಾಲಿನಲ್ಲಿ 2.70 ಕೋಟಿ ವಹಿವಾಟನ್ನು ನಡೆಸಲಾಗಿತ್ತು, ಸರ್ಕಾರಿ ಇಲಾಖೆಗಳಿಗೆ ಬೇಕಾದ ಪೀಠೋಪಕರಣಗಳು, ಲೇಖನ ಮತ್ತು ಚುನಾವಣಾ ಸಾಮಗ್ರಿ ಸೇರಿದಂತೆ ಇತರೆ ವಸ್ತುಗಳನ್ನು ಪೂರೈಕೆ ಮಾಡಲಾಗಿದೆ. 30 ಜನ ಕುಶಲಕರ್ಮಿಗಳಿಗೆ ಪ್ರೋತ್ಸಾಹಿಸಿ ಸಣ್ಣ ಕೈಗಾರಿಕೆಗಳಿಗೆ ಮಾರುಕಟ್ಟೆ ಒದಗಿಸಲಾಗಿದೆ ಎಂದರು.
ವಕೀಲ ಜಗದೀಶ್ ಮಾತನಾಡಿ, ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಒಗ್ಗಟ್ಟಿನಿಂದ ಶ್ರಮಮಿಸುತ್ತಿರುವ ಫಲವಾಗಿ ಕಳೆದ 3 ವರ್ಷಗಳಿಂದಲೂ ಈ ಸಂಸ್ಥೆ ಲಾಭದಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನಾರ್ಹವಾದುದು. ಮುಂದೆಯು ಈ ಸಂಸ್ಥೆಯ ಬೆಳವಣಿಗೆಗೆ ಎಲ್ಲಾ ರೀತಿ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ನಗರಸಭೆಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕ ಹಾಗೂ ವಕೀಲ ಜಗದೀಶ್ ಅವರನ್ನು ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.
ಉಪಾಧ್ಯಕ್ಷ ರವೀಂದ್ರ ಆಚಾರ್ಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಜೆ. ಸುರೇಶ್, ವ್ಯವಸ್ಥಾಪಕ ನಿರ್ದೇಶಕ ಶಿವಮೂರ್ತಿ, ನಾಗೇಶ, ಮ್ಯಾನೇಜರ್ ಕುಮಾರಸ್ವಾಮಿ, ನಿರ್ದೇಶಕ ವಿ.ಎಸ್. ನಾಗೇಶ್ ಕುಮಾರ್, ಸಾವಿತ್ರಮ್ಮ ಹಾಜರಿದ್ದರು.