'ಬ್ಯಾಂಕ್ ಸಿಬ್ಬಂದಿ ಕೊರತೆ ನಿವಾರಿಸಿ'
ನರಸಿಂಹರಾಜಪುರ: ಬಾಳೆಹೊನ್ನೂರು ಸಮೀಪದ ಎಲೆಮಡಲು ಸಿಂಡಿಕೆಟ್ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ಇದನ್ನು ಸರಿಪಡಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಎಲೆಮಡಲು ಸಿಂಡಿಕೆಟ್ ಬ್ಯಾಂಕ್ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಭೆಯಲ್ಲಿ ಸಮಸ್ಯೆ ತಿಳಿಸಿದ ಗ್ರಾಹಕರು, ಸಿಂಡಿಕೆಟ್ ಬ್ಯಾಂಕ್ನಲ್ಲಿ ಸೇಫ್ ಲಾಕರ್ ಅಗತ್ಯವಿದೆ. ಎ.ಟಿ.ಎಂ. ಸೌಲಭ್ಯವನ್ನೂ ಒದಗಿಸುವಂತೆ ಬ್ಯಾಂಕಿನ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಿಂಡಿಕೆಟ್ ಬ್ಯಾಂಕಿನ ಪ್ರಬಂಧಕ ಎಲ್.ಸಿ. ಸಂತೋಷ್ ಮಾತನಾಡಿ, ಗ್ರಾಹಕರು ನೀಡಿದ ಸಲಹೆಯನ್ನು ಬ್ಯಾಂಕಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆಯನ್ನು ಆರ್.ಜೆ.ಪಿ. ಹೆಬ್ಬಾರ್ ವಹಿಸಿದ್ದರು. ಗುರುವಪ್ಪಗೌಡ, ಗೌರಿಶಂಕರ್, ಜಾನ್, ವಿದ್ಯಾಧರ, ಲಿಂಗೇಗೌಡ, ಪರಮೇಶ್ವರ ಸೇರಿದಂತೆ ನೂರಾರು ಬ್ಯಾಂಕಿನ ಗ್ರಾಹಕರು ಸಭೆಯಲ್ಲಿ ಪಾಲ್ಗೊಂಡು ಬ್ಯಾಂಕಿನ ಅಧಿಕಾರಿಗಳೊಂದಿಗೆ ಚರ್ಚಿಸಿದರು.