ಭದ್ರಾ: ಶಾಸಕರ ಹೇಳಿಕೆಗೆ ವಿರೋಧ
ಕ.ಪ್ರ.ವಾರ್ತೆ, ತರೀಕೆರೆ, ಮೇ 26 ನೂತನ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ಭದ್ರಾ ಮೇಲ್ದಂಡೆ ಪಥ ಬದಲಾವಣೆ ಆಸಾಧ್ಯ ಎಂದು ನೀಡಿರುವ ಹೇಳಿಕೆ ಅಂತಕಕಾರಿಯಾಗಿದ್ದು, ರೈತರ ಹಿತಾಸಕ್ತಿಗೆ ವಿರೋಧವಾಗಿದೆ ಎಂದು ಹೊಸೂರು ನೀಲಕಂಠಪ್ಪ ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲೂಕಿಗೆ ಅನ್ಯಾಯವಾಗುವುದನ್ನು ತಪ್ಪಿಸಿ, ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಿದ್ದ ಅವರು, ಈಗ ನಿಲುವು ಬದಲಿಸಿರುವುದು ದುರದೃಷ್ಟಕರ. ಭದ್ರಾ ಮೇಲ್ದಂಡೆ ಯೋಜನೆ ತರೀಕೆರೆ ತಾಲೂಕಿನ ಜನರಿಗೆ ದೊಡ್ಡ ಶಾಪ. ಇದರ ವಿರುದ್ಧ ತಾಲೂಕಿನ ಜನ ನೀಡಿರುವ ಆದೇಶ ಗಮನಾರ್ಹವಾದುದು ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯ ಪರವಾಗಿ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ಬೆಂಬಲ ನೀಡಿದರೆ, ಅವರ ಬಗ್ಗೆ ಬಹಳ ಭರವಸೆ ಇಟ್ಟುಕೊಂಡಿರುವ ತಾಲೂಕಿನ ಜನತೆಗೆ ಬಹಳ ನಿರಾಶೆಯಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.