ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಾಲ ಮನ್ನಾ: ಇಕ್ಕಟ್ಟಿನಲ್ಲಿ ಕೇಂದ್ರ ಹಣಕಾಸು ಇಲಾಖೆ

Lingaraj Badiger
Updated On : 27 May 2013, 10:59 am

ಕಪ್ರವಾರ್ತೆ,ಚಿಕ್ಕಮಗಳೂರು,ಮೇ 26
ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳ ಮಾಲೀಕರ ಸಾಲ ಮನ್ನಾ ಮಾಡುವಂತೆ ಕೃಷಿ ತಜ್ಞ ಗೋರಖ್ ಸಿಂಗ್ ಅವರು ಸಲ್ಲಿಸಿರುವ ವರದಿಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯವರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.
 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಸೋಮವಾರ ವಿಚಾರಣೆ ನಡೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಆಕ್ಷೇಪಣಾ ಅರ್ಜಿ ಸಲ್ಲಿಸಬೇಕಾಗಿದೆ.
 ಹೈಕೋರ್ಟ್ ಕಳೆದ ವರ್ಷ ಸೆಪ್ಟಂಬರ್ 25 ನಿರ್ದೇಶನ ನೀಡಿ ಮೂರು ತಿಂಗಳೊಳಗೆ ವರದಿಯನ್ನು ಅನುಷ್ಠಾನಕ್ಕೆ ತರುವಂತೆ ತಿಳಿಸಿತ್ತು. ಆದರೆ, ಯಾವುದೇ ಕ್ರಮಕ್ಕೆ ಮುಂದಾಗದೆ ಇದ್ದರಿಂದ ಹೈಕೋರ್ಟ್‌ನ ವಿಭಾಗೀಯ ಪೀಠ ಕೇಂದ್ರದ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಆರ್.ಎಸ್. ಗುಜ್ರಾಲ್ ಅವರಿಗೆ ನ್ಯಾಯಾಂಗ ನಿಂಧನೆಯ ನೋಟೀಸ್ ಜಾರಿ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ನಡೆಯಲಿದೆ.
ಆಗಿದ್ದೇನು: ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುಮಾರು 59 ಸಾವಿರ ಹೆಕ್ಟೇರ್ ಅಡಿಕೆ ತೋಟಗಳು ಹಳದಿ ಎಲೆ ರೋಗ, ಬೇರು ಹೂಳ, ತೊಂಡೆ ರೋಗಕ್ಕೆ ತುತ್ತಾಗಿವೆ. ಇವುಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಕೇಂದ್ರ ಸರ್ಕಾರ ಗೋರಖ್ ಸಿಂಗ್ ನೇತೃತ್ವದಲ್ಲಿ  ಸಮಿತಿಯನ್ನು ರಚನೆ ಮಾಡಿತ್ತು. ಅದರನ್ವಯ ಸಮಿತಿಯ ತಂಡ ಈ ಮೂರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಿತ್ತು. ಅದರಲ್ಲಿ ಕೆಲವು ಶಿಫಾರಸ್ಸುಗಳನ್ನು ಸಹ ಮಾಡಿತ್ತು.
ಅದರಂತೆ 4 ಹೆಕ್ಟೇರ್ ಒಳಗಿನ ತೋಟಗಳ ಮಾಲೀಕರ ಸಾಲ ಮನ್ನಾ, ಹಾಲಿ ಪಡೆದಿರುವ ಸಾಲ ಮರುಪಾವತಿಗೆ ಕಾಲಾವಕಾಶ ನೀಡಬೇಕು, ಇದರ ಜತೆಗೆ ತೋಟಗಳ ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡಬೇಕೆಂದು ಹೇಳಲಾಗಿತ್ತು.
ಅದರ ಪ್ರಕಾರ ಸಾಲ ಮರು ಪಾವತಿಗೆ 11 ವರ್ಷ ಕಾಲಾವಕಾಶ ನೀಡಲಾಗಿದೆ. ತೋಟಗಳ ಪುನಶ್ಚೇತನಕ್ಕಾಗಿ ಪ್ರತಿಯೊಬ್ಬ ಬೆಳೆಗಾರರಿಗೆ ತಲಾ 30 ಸಾವಿರ ನೀಡಲಾಗಿದೆ. ಆದರೆ, ಸಾಲ ಮನ್ನಾ ಮಾತ್ರ ಈವರೆಗೆ ಆಗಿಲ್ಲ. ಇದನ್ನು ಪ್ರಶ್ನಿಸಿ ಕೆಪಿಸಿಸಿ ಕಿಸಾಸ್ ಸೆಲ್ ಉಪಾಧ್ಯಕ್ಷ ಸಚಿನ್ ಮೀಗಾ ಹಾಗೂ ಇತರರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಗೋರಖ್ ಸಿಂಗ್ ವರದಿ ಅನುಷ್ಟಾನಗೊಳಿಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿತ್ತು. ಆದರೆ, ಸಕಾಲದಲ್ಲಿ ಈ ಕೆಲಸ ಆಗಿಲ್ಲ.
ಆಗ ಮತ್ತೆ ಹೈಕೋರ್ಟ್‌ನ ಮೊರೆ ಹೋದಾಗ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳಿಗೆ ನ್ಯಾಯಾಂಗ ನಿಂಧನೆಯ ನೋಟೀಸ್ ಜಾರಿ ಮಾಡಲಾಗಿದೆ.
1200 ಕೋಟಿ: ಮೂರು ಜಿಲ್ಲೆಗಳ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡಲು ಸುಮಾರು 1200 ಕೋಟಿ ಬೇಕು. ಅದುದರಿಂದಲೇ ಕೇಂದ್ರ ಹಣಕಾಸು ಸಚಿವಾಲಯ ಸಾಲ ಮನ್ನಾಕ್ಕೆ ಮೇನಾಮೇಷ ಎಣಿಸುತ್ತಿದೆ. ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳಿಗೆ ನ್ಯಾಯಾಂಗ ನಿಂಧನೆಯ ನೋಟೀಸ್ ಜಾರಿಯಾಗುತ್ತಿದ್ದಂತೆ, ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದ ಸಚಿನ್ ಮೀಗಾ ಅವರು ಬೆಳೆಗಾರರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ಕಳೆದ ಅಕ್ಟೋಬರ್ 9 ರಂದು ಕೆಮಿಯಟ್ ಅರ್ಜಿ ಸಲ್ಲಿಸಿದ್ದಾರೆ.
ಅದುದರಿಂದ ಕೇಂದ್ರ ಹಣಕಾಸು ಸಚಿವಾಲಯ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನ ಮೆಟ್ಟಿಲು ಏರದಂತೆ ಮಾಡಿದೆ. ಅದ್ದರಿಂದ ಹಣಕಾಸು ಸಚಿವಾಲಯ ಇಕ್ಕಟ್ಟಿನಲ್ಲಿ ಸಿಲುಕಿದೆ. ಬೆಳೆಗಾರರ ಸಾಲವನ್ನು ಮನ್ನಾ ಮಾಡಬೇಕು, ಇಲ್ಲವಾದರೆ ಕಾನೂನು ಕ್ರಮವನ್ನು ಎದುರಿಸಬೇಕಾಗಿದೆ.
ಕೇಂದ್ರ ಸರ್ಕಾರ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರ, ಹಳದಿ ಎಲೆ ರೋಗ ಪೀಡಿತ ಅಡಿಕೆ ತೋಟಗಳ ಮಾಲೀಕರ ನೆರವಿಗಾಗಿ ಗೋರಖ್ ಸಿಂಗ್ ನೇತೃತ್ವದ ಸಮಿತಿಯನ್ನು ರಚನೆ ಮಾಡಿತ್ತು. ಇದೇ ಸರ್ಕಾರ ಅಧಿಕಾರದಲ್ಲಿ ಇರುವಾಗಲೇ ಗೋರಖ್ ಸಿಂಗ್ ವರದಿ ನೀಡಿದ್ದಾರೆ.
ಅಡಿಕೆ ಬೆಳೆಗಾರರ ನೆರವಿಗೆ ಬರುವುದಾಗಿ ಕೇಂದ್ರದ ಸಚಿವರು ಭರವಸೆ ನೀಡಿದ್ದರು. 2010ರಲ್ಲಿ ನಡೆದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರದ ವೇಳೆಯಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರು ಭರವಸೆ ನೀಡಿದ್ದರು. ಆದರೆ, ಈ ಯಾವುದೇ ಭರವಸೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಡಿಕೆ ಬೆಳೆಗಾರರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, ಇಂದು, ನ್ಯಾಯಾಲಯದ ಮುಂದೆ ಅಧಿಕಾರಿಗಳು ಕೈಕಟ್ಟಿ ತಲೆ ತಗ್ಗಿಸಿ ನಿಂತುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ.

ವಿಶ್ವಾಸ ಇದೆ
ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಗೋರಖ್‌ಸಿಂಗ್ ವರದಿ ಅನುಷ್ಟಾನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನ್ಯಾಯದ ಪರ ಜಯ  ಸಿಕ್ಕಿದೆ. ಮುಂದಿನ ದಿನಗಳಲ್ಲೂ ನ್ಯಾಯ ಸಿಗುವ ವಿಶ್ವಾಸ ಇದೆ.
- ಸಚಿನ್ ಮೀಗಾ.
ಉಪಾಧ್ಯಕ್ಷರು, ಕೆಪಿಸಿಸಿ ಕಿಸಾನ್ ಸೆಲ್.
-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement