ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೃಷಿ ಮಿಷನ್ ಹೆಸರಲ್ಲಿ ದುರುಪಯೋಗ

Lingaraj Badiger
Updated On : 28 May 2013, 10:29 am

ಚಿಕ್ಕಮಗಳೂರು ಮೇ 27
ಸಾವಯವ ಕೃಷಿ ಮಿಷನ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳನ್ನು  ಆರ್‌ಎಸ್ ಎಸ್‌ಮತ್ತು ಬಿಜೆಪಿ ಕಾರ್ಯಕರ್ತರು ದುರುಪಯೋಗಪಡಿಸಿಕೊಂಡಿರುವುದನ್ನು ಸೂಕ್ತ ತನಿಖೆಗೆ ಒಳಪಡಿಸಿ ಸಾವಯವ ಮಿಷನ್‌ಗೆ ರೈತ ಪ್ರತಿನಿಧಿಗಳನ್ನು ನೇಮಿಸಬೇಕು ಎಂದು ಜಿಲ್ಲಾ ಜೆಡಿಎಸ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.  
 ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಜೆಡಿಎಸ್ ಜಿಲ್ಲಾ ಮುಖಂಡ ಎಚ್.ಎಚ್. ದೇವರಾಜ್, ರೈತರ ಕೃಷಿ ಬಳಕೆಗೆ ಸದ್ಬಳಕೆಯಾಗಬೇಕಾಗಿದ್ದ ಸರ್ಕಾರದ ಅನುದಾನವನ್ನು ಸಾವಯವ ಕೃಷಿ ಮಿಷನ್‌ನಲ್ಲಿ ಈ ರೀತಿ ದುರುಪಯೋಗ ಅವ್ಯಾಹತವಾಗಿ ನಡೆದಿದೆ.
ಈ ಬಗ್ಗೆ ಕೂಡಲೇ ರಾಜ್ಯ ಸರ್ಕಾರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಖಂಡನೆ: ಜಿಲ್ಲೆಯ ಮೂಡಿಗೆರೆಯ ಒತ್ತುವರಿದಾರರನ್ನು ಒಕ್ಕಲೆಬ್ಬಿಸುವ ನೆಪದಲ್ಲಿ ಹೈಕೋರ್ಟ್ ಆದೇಶ ದುರುಪಯೋಗಪಡಿಸಿಕೊಂಡು ಅರಣ್ಯ ಇಲಾಖೆಯವರು ಬೆಳೆದು ನಿಂತ ಸಾವಿರಾರು ಗಿಡಮರಗಳನ್ನು ಕಡಿದು ನಾಶ ಮಾಡಿರುವುದನ್ನು ಜೆಡಿಎಸ್ ಖಂಡಿಸುತ್ತದೆ.  ಈ ರೀತಿ ಗಿಡಮರಗಳನ್ನು ಕಡಿದು ಮಾರಣ ಹೋಮ ನಡೆಸಿರುವ ಅರಣ್ಯಾಧಿಕಾರಿಗಳ ಮೇಲೆ ಅರಣ್ಯ ಕಾಯಿದೆ ಪ್ರಕಾರ ಮೊಕದ್ದಮೆ ದಾಖಲಿಸಬೇಕು ಎಂದು ಜೆಡಿಎಸ್ ಒತ್ತಾಯಿಸುತ್ತದೆ.
  ಛತ್ತೀಸ್‌ಗಡದಲ್ಲಿ ನಕ್ಸಲರು ಕಾಂಗ್ರೆಸ್ ಮುಖಂಡರನ್ನು ಕೊಲೆ ಮಾಡಿರುವ ಅಮಾನವೀಯ ಕೃತ್ಯವನ್ನು  ಪಕ್ಷವು ಖಂಡಿಸುತ್ತದೆ ಎಂದಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ನಡೆದಿರುವ ಅಭಿವೃದ್ಧಿ  ಕಾಮಗಾರಿಗಳು ಸಂಪೂರ್ಣ ಕಳಪೆ ಕಾಮಗಾರಿಗಳೆಂದು ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳು ಹೋರಾಟ ಮಾಡಿದ್ದವು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದ್ದು, ಈ ಕಳಪೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸಿ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಒಳ ಒಪ್ಪಂದ: ಚಿಕ್ಕಮಗಳೂರು ನಗರಸಭೆಯಲ್ಲಿ ಅಧ್ಯಕ್ಷೀಯ ಮೀಸಲಾತಿ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ಕೆಲ ನಾಯಕರು ಬಿಜೆಪಿಯರಿಗೆ ಅನುಕೂಲ ಮಾಡಿಕೊಡಲು ತಯಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ದೇವರಾಜು, ಮೀಸಲಾತಿಯನ್ನು ದಲಿತ ವರ್ಗಕ್ಕೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
  ಜಿಲ್ಲೆಯ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಮಳೆಯಾಗದೇ ಅಡಕೆ, ತೆಂಗು, ಕಾಫಿ ಮತ್ತು ವಾಣಿಜ್ಯ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು ಕೂಡಲೇ ರಾಜ್ಯ ಸರ್ಕಾರವು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement