ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಕ್ಸಲ್ ನಿಗ್ರಹ ಕುರಿತು ಮೃದು ಧೋರಣೆ ಸಲ್ಲದು

Lingaraj Badiger
Updated On : 28 May 2013, 10:35 am

ಚಿಕ್ಕಮಗಳೂರು:
ನಕ್ಸಲ್ ಚಟುವಟಿಕೆ ಭಯೋತ್ಪಾದಕ ಕೃತ್ಯವಾಗಿದ್ದು ನಕ್ಸಲ್ ನಿಗ್ರಹ ಕುರಿತು ಮೃಧು ಧೋರಣೆ ಅನುಸರಿಸಿದಲ್ಲಿ ದೇಶ ಅರಾಜಕತೆಯತ್ತ ಸಾಗುವ ಅಪಾಯವಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ.
 ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದುಷ್ಟ ಶಕ್ತಿಗಳು ದೇಶವನ್ನು ಅಭದ್ರಗೊಳಿಸುವ ಘಟನೆಗಳು ಮರುಕಳಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ನಿಲುವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಖಂಡಿಸಬೇಕಿದೆ: ಛತ್ತೀಸ್‌ಗಡದಲ್ಲಿ ನಡೆದಿರುವ ಘಟನೆ ಹೇಯಕೃತ್ಯವಾಗಿದೆ. ನಕ್ಸಲರ ಅಟ್ಟಹಾಸಕ್ಕೆ ರಾಜಕೀಯ ನಾಯಕರು ಬಲಿಯಾಗಿದ್ದು ದುರಂತವಾಗಿದ್ದು ಇದನ್ನು ಎಲ್ಲರೂ ಸರ್ವಸಮ್ಮತವಾಗಿ ಖಂಡಿಸಬೇಕಿದೆ. ಈಗಲಾದರೂ ನಕ್ಸಲ್ ಚಟುವಟಿಕೆ ಅಟ್ಟಹಾಸವನ್ನು ಮಟ್ಟಹಾಕುವ ಕ್ರಮ ಕೈಗೊಳ್ಳದೆ ಸಮಾನತೆ ಆರ್ಥಿಕತೆ ಎಂದು ನಕ್ಸಲರ ಕುರಿತು ಚಿಂತನೆ ನಡೆಸುವುದರಲ್ಲಿ ಅರ್ಥವಿಲ್ಲ. ಒಂದೆಡೆ ಆರ್ಥಿಕ ಮತ್ತು ಸಾಮಾಜಿಕ ಚಿಂತನೆ ನಿಟ್ಟಿನಲ್ಲಿ ನಕ್ಸಲರು ಅಟ್ಟಹಾಸ ಮೆರೆಯುತ್ತಿದ್ದರೆ, ಮತ್ತೊಂದೆಡೆ ಮತದ ಹೆಸರಿನಲ್ಲಿ ದೇಶದಲ್ಲಿ ಭಯೋತ್ಪಾದನೆ ನಡೆಸುತ್ತಾ ದೇಶವನ್ನು ಅಭದ್ರಗೊಳಿಸುವ ಸಂಚು ನಡೆಸುತ್ತಾ ಅಮಾಯಕರ ಮಾರಣ ಹೋಮ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಭೀಕರ ಅನಾಹುತ: ಇದರ ಉದ್ದೇಶ ದೇಶವನ್ನು ಅರಾಜಕತೆಯತ್ತ ತಳ್ಳಿ ದೇಶವನ್ನು ಛಿಧ್ರಗೊಳಿಸುವ ಹುನ್ನಾರವಾಗಿದೆ. ನಕ್ಸಲ್ ದಾಳಿಯ ಮುಂಜಾಗ್ರತೆಯ ಅರಿವಿದ್ದರೂ ಛತ್ತೀಸ್‌ಗಡದಲ್ಲಿ ಘಟನೆ ನಡೆಯುವುದಕ್ಕಿಂತ ಮುಂಚೆಯೇ ಎಚ್ಚರಿಕೆ ವಹಿಸಿದ್ದರೆ ಇಂತಹ ಭೀಕರ ಅನಾಹುತ ಸಂಭವಿಸುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಈ ನಕ್ಸಲ್ ಚಟುವಟಿಕೆ ನಡೆಸುವವರ ಬಗ್ಗೆ ಗಂಭೀರವಾಗಿ ಚರ್ಚಿಸುವ ಮೂಲಕ ಕಠಿಣ ನಿಲುವು ತೆಗೆದುಕೊಳ್ಳಬೇಕು ಬೇಕು ಎಂದು ರವಿ ಸರ್ಕಾರಗಳಿಗೆ ಮನವಿ ಮಾಡಿದರು.
ಮೃಧು ಧೋರಣೆ ಸಡಿಲಿಸಿ: ಪೊಲೀಸ್ ಪಟ್ಟಿಯಲ್ಲಿ ನಕ್ಸಲರ ಜೊತೆ ಸಂಪರ್ಕ ಹೊಂದಿರುವವರ ಬಗ್ಗೆ ಇಲಾಖೆ ಅವರ ಚಲನವಲನಗಳನ್ನು ಗಂಭೀರವಾಗಿ ಪರಿಗಣಿಸಿ ಮೃಧು ಧೋರಣೆ ಸಡಿಲಿಸಿ ರಾಜ್ಯ ಛತ್ತೀಸ್‌ಗಡದಂತೆ ಮತ್ತೊಂದು ರಕ್ತ ಪಿಪಾಸು ಆಗದಂತೆ ಮತ್ತು ಅಮಾಯಕರು ಬಲಿಯಾಗದಂತೆ ಅಗತ್ಯ ರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ಕಿಗ್ಗಾ ಮತ್ತಿತರ ಕಡೆ ನಕ್ಸಲ್ ಚಟುವಟಿಕೆ ಗರಿಗೆದರುತ್ತಿದ್ದು ಪೊಲೀಸ್ ಇಲಾಖೆ ಸೇರಿದಂತೆ ಕಾಂಗ್ರೆಸ್ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
 ರಾಜ್ಯದಲ್ಲಿ ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳ ಸ್ಥಾಪನೆ ಕುರಿತು ಸುಖದೇವ್ ವರದಿ ಸಂವಿಧಾನ ವಿರೋಧಿ ಎಂಬುದನ್ನು ನಮ್ಮ ಪರ ಎತ್ತಿ ಹಿಡಿದಿದೆ. ಮತದ ಆಧಾರದಲ್ಲಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡುವ ಮೂಲಕ ದೇಶವನ್ನು ಒಡೆಯುವ ಹುನ್ನಾರ ಮಾಡಬಾರದು ಎಂದು ವರದಿಯಲ್ಲಿ ಹೇಳಿದೆ. ವಿಶ್ವವಿದ್ಯಾಲಯಗಳ ಸ್ಥಾಪನೆಗೆ ನಮ್ಮ ಯಾವುದೇ ವಿರೋಧ ಇಲ್ಲ. ಆದರೆ ಮತೀಯ ಹೆಸರಿನಲ್ಲಿ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿರುವುದರ ಬಗ್ಗೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರ ಮತೀಯ ಆಧಾರದಲ್ಲಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮಾಡಿ ಸಾಮರಸ್ಯ ಒಡೆಯುವುದು ಬೇಡ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಗೋಷ್ಠಿಯಲ್ಲಿ ವರಸಿದ್ದಿ ವೇಣುಗೋಪಾಲ್, ತಾಪಂ ಮಾಜಿ ಅಧ್ಯಕ್ಷ ಕನಕರಾಜ್, ವೆಂಕಟೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement