ಬೀರೂರಲ್ಲಿ ಡೆಂಘೀ ಜ್ವರ ಪತ್ತೆ: ನಾಗರಿಕರಲ್ಲಿ ಆತಂಕ
ಬೀರೂರು: ಬೀರೂರು ಪಟ್ಟಣದಲ್ಲಿ ಡೆಂಘೀ ಜ್ವರದ ಪ್ರಕರಣಗಳು ಪತ್ತೆಯಾಗಿದ್ದು ಪಟ್ಟಣದ ನಾಗರೀಕರಲ್ಲಿ ಆತಂಕವನ್ನು ಹೆಚ್ಚಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಕೆಲ ಖಾಸಗಿ ನರ್ಸಿಂಗ್‌ಹೋಂಗಳಲ್ಲಿ ಜ್ವರದ ತಾಪದಿಂದಾಗಿ ಪರೀಕ್ಷೆಗೆಂದು ದಾಖಲಾಗಿದ್ದ ರೋಗಿಗಳಲ್ಲಿ ಡೆಂಗ್ಯೂ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಹಾಗು ರಕ್ತದ ಪರೀಕ್ಷೆಗಾಗಿ ಕೆಲವು ರೋಗಿಗಳ ರಕ್ತವನ್ನು ತಜ್ಞರ ಪರಿಶೀಲನೆಗೆ ಕಳುಹಿಸಲಾಗಿದೆ.
ಚರಂಡಿಗಳು ಮತ್ತಿತರ ಕಡೆಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಔಷಧಿಗಳನ್ನು ಸಿಂಪಡಿಸದೇ ಇರುವುದು ಹಾಗೂ ಮಳೆ ಬಾರದಿರುವುದರಿಂದ ಈ ರೋಗ ಉಲ್ಭಣಿಸಬಹುದೆಂಬ ಭೀತಿ ಉಂಟಾಗಿದ್ದು ಪುರಸಭೆಯು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಬಿ.ಎಂ. ಮಂಜುನಾಥ್ ಅಧ್ಯಕ್ಷ
ಬೀರೂರು: ಪಟ್ಟಣದ ಶ್ರೀ ಜಗದ್ಗುರು ರೇಣುಕಾ ಸಾಂಸ್ಕೃತಿಕ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಇಲ್ಲಿನ ಶಿವಾನಂದಾಶ್ರಮ ಆವರಣದಲ್ಲಿ ಸಂಜೆ ನಡೆಯಿತು.
ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಗತಿಗೆ ಕಾರಣರಾಗಿದ್ದ ವಿ.ಎಂ. ಶಾಂತಕುಮಾರ್ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ ಶ್ರೀ ಯುತರ ಸೇವೆಯನ್ನು ಸ್ಮರಿಸಲಾಯಿತು. ಈವರೆಗೂ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಿ.ಎಂ. ಮಂಜುನಾಥ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಹಾಗು ಪಿ.ವಿ. ಪ್ರಭುಕುಮಾರ್ ಅವರನ್ನು ಉಪಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.